ಶಿವಮೊಗ್ಗ: ಬಿಜೆಪಿ ಕಾರ್ಪೋರೇಟರ್ ವಿರುದ್ದ ಡಿಸಿ, ಎಸ್.ಪಿ.ಗೆ ಪಾಲಿಕೆ ಆಯುಕ್ತೆ ದೂರು

Update: 2018-10-11 17:35 GMT
ಪಾಲಿಕೆ ಆಯುಕ್ತೆ ಚಾರುಲತಾ

ಶಿವಮೊಗ್ಗ, ಅ. 11: ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆದ ಚಾರುಲತಾ ಸೋಮಲ್‍ರವರು ಬಿಜೆಪಿ ಕಾರ್ಪೋರೇಟರ್‍ವೊಬ್ಬರ ವಿರುದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾರಕ್ಷಣಾಧಿಕಾರಿಗೆ ದೂರು ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. 

ವಾರ್ಡ್ ನಂಬರ್ 8 ರಿಂದ ಆಯ್ಕೆಯಾಗಿರುವ ಕಾರ್ಪೋರೇಟರ್ ಚೆನ್ನಬಸಪ್ಪ (ಚೆನ್ನಿ) ಎಂಬುವರ ವಿರುದ್ದ ಆಯುಕ್ತೆ ಚಾರುಲತಾರವರು ಈ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಇನ್ನಷ್ಟೆ ವಿವರಗಳು ಲಭ್ಯವಾಗಬೇಕಾಗಿದೆ. 

ಕಾರಣವೇನು?: ಲೋಕಸಭೆ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆ ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ, ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮ ಹಾಗೂ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಗಳನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. 

ದಸರಾ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಕಾರ್ಪೋರೇಟರ್ ಚೆನ್ನಬಸಪ್ಪರವರು ಆಯುಕ್ತೆ ಚಾರುಲತಾರವರ ಮೊಬೈಲ್‍ಗೆ ಕರೆ ಮಾಡಿ, ಕೆಲ ವಿಷಯಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 

'ಸಹಾಯಕ ಚುನಾವಣಾಧಿಕಾರಿಯಾಗಿರುವ ತಮ್ಮ ಜೊತೆ ಚೆನ್ನಬಸಪ್ಪರವರು, ಮಾನಸಿಕ ಖಿನ್ನತೆ ಉಂಟು ಮಾಡುವ ರೀತಿಯಲ್ಲಿ ಮಾತನ್ನಾಡಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಾರೆ. ಅವರ ವಿರುದ್ದ ಚುನಾವಣಾ ಮಾದರಿ ನೀತಿ ಸಂಹಿತೆಯಡಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ' ಆಯುಕ್ತೆಯು ಡಿ.ಸಿ. ಹಾಗೂ ಎಸ್.ಪಿ.ಯವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News