ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ಮೂರು ದಿನವಾದರೂ ಸಲ್ಲಿಕೆಯಾಗಿಲ್ಲ ಒಂದೇ ಒಂದು ನಾಮಪತ್ರ

Update: 2018-10-11 17:40 GMT

ಶಿವಮೊಗ್ಗ, ಅ.11: ದಿಢೀರ್ ಎದುರಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಅಧಿಸೂಚನೆ ಪ್ರಕಟವಾಗಿ ಮೂರು ದಿನವಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಒಂದೇ ಒಂದು ನಾಮಪತ್ರ ಕೂಡ ಸಲ್ಲಿಕೆಯಾಗಿಲ್ಲ.

ಅ. 9 ರಿಂದಲೇ ನಾಮಪತ್ರ ಸಲ್ಲಿಕೆಗೆ ವಿಧ್ಯುಕ್ತ ಚಾಲನೆ ದೊರಕಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿ.ಸಿ. ಡಾ. ಕೆ. ಎ. ದಯಾನಂದ್‍ರವರು ನಾಮಪತ್ರ ಸ್ವೀಕರಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಮಪತ್ರ ಸ್ವೀಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸಭಾಂಗಣದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ. 

ಹಾಗೆಯೇ ಡಿ.ಸಿ. ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಲು ಸಮಯಾವಕಾಶ ಕಲ್ಪಿಸಲಾಗಿದೆ. ಗುರುವಾರದವರೆಗೂ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ಮಾಹಿತಿ ನೀಡಿವೆ. 

ಅ.16 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಅ. 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.20 ರಂದು ನಾಮಪತ್ರ ವಾಪಾಸ್ ಪಡೆಯಲು ಅಂತಿಮ ದಿನವಾಗಿದೆ. ನವೆಂಬರ್ 3 ರಂದು ಮತದಾನ ನಡೆಯಲಿದೆ. ನ. 6 ರಂದು ಮತ ಎಣಿಕೆಯಾಗಲಿದೆ. ನ. 8 ಕ್ಕೆ ನೀತಿ-ಸಂಹಿತೆ ಅಂತ್ಯಗೊಳ್ಳಲಿದೆ.

ಮಾಹಿತಿ ಸಂಗ್ರಹ: ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ಅಭ್ಯರ್ಥಿಗಳು ಸಲ್ಲಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿ 25 ಸಾವಿರ ರೂ. ಹಾಗೂ ಎಸ್ಸಿ-ಎಸ್ಟಿ ವರ್ಗದವರು 12,500 ಠೇವಣಿ ಮೊತ್ತ ಪಾವತಿಸಬೇಕು. ನಾಮಪತ್ರದಲ್ಲಿ ಕೊಂಚ ಲೋಪವಾದರೂ ಅರ್ಜಿ ತಿರಸ್ಕೃತವಾಗಲಿದೆ. ಈ ಕಾರಣದಿಂದ ಕೆಲ ಅಭ್ಯರ್ಥಿಗಳು ಡಿ.ಸಿ. ಕಚೇರಿಗೆ ಆಗಮಿಸಿ ಚುನಾವಣಾ ವಿಭಾಗದ ಅಧಿಕಾರಿ-ಸಿಬ್ಬಂದಿಗಳನ್ನು ಭೇಟಿಯಾಗಿ ಕೂಲಂಕಷ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಾಮಪತ್ರದ ಜೊತೆ ಸಲ್ಲಿಸಬೇಕಾದ ಪ್ರಮಾಣ ಪತ್ರ, ಅರ್ಜಿ ಭರ್ತಿ ಮಾಡಬೇಕಾದ ಮಾದರಿ ಸೇರಿದಂತೆ ಹಲವು ವಿಷಯಗಳ ಕುರಿತಂತೆ ವಿವರ ತಿಳಿದುಕೊಳ್ಳುತ್ತಿದ್ದಾರೆ. 

ಕಾವೇರದ ಕಣ: ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯ ಬಗ್ಗೆ ಮತದಾರರ ವಲಯ ಮಾತ್ರವಲ್ಲದೆ, ರಾಜಕೀಯ ಪಕ್ಷಗಳಲ್ಲಿಯೂ ನಿರಾಸಕ್ತಿಯ ಭಾವ ಕಂಡುಬರುತ್ತಿದೆ. ಇದರಿಂದ ಸದ್ಯಕ್ಕೆ ಚುನಾವಣಾ ಕಣ ಕಾವೇರಿಲ್ಲ. ಎಲ್ಲ ಪಕ್ಷಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಘೋಷಣೆಯ ನಂತರ ಕಣ ರಂಗೇರುವ ಲಕ್ಷಣಗಳು ಗೋಚರವಾಗುತ್ತಿವೆ. 

ಸಕಲ ಸಿದ್ದತೆ: ಮತ್ತೊಂದೆಡೆ ಜಿಲ್ಲಾಡಳಿತೆ ಸಮರೋಪಾದಿಯಲ್ಲಿ ಚುನಾವಣಾ ಸಿದ್ದತೆ ನಡೆಸಲಾರಂಭಿಸಿದೆ. ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್‍ರವರು ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. 'ಸುಗಮ ಶಾಂತಿಯುತವಾಗಿ ಉಪ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕ್ಷೇತ್ರದಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಕ್ರಮಕೈಗೊಂಡಿದೆ' ಎಂದು ತಿಳಿಸಿದ್ದಾರೆ. 

ನಾಮಪತ್ರ ಸಲ್ಲಿಸಲು ಆಗಮಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿರ್ದೇಶನ ಪಾಲನೆ ಮಾಡಬೇಕು. ಅಭ್ಯರ್ಥಿ ಸೇರಿದಂತೆ ಐವರು ಮಾತ್ರ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಬೇಕು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿಗೆ ಸೇರಿದ ಒಂದು ವಾಹನ ಮಾತ್ರ ಕಚೇರಿ ಆವರಣ ಪ್ರವೇಶಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. 

ಅಕ್ರಮ ತಡೆಗೆ 17 ಚೆಕ್ ಪೋಸ್ಟ್ : ಡಿ.ಸಿ. ಡಾ. ಕೆ.ಎ.ದಯಾನಂದ್
'ಚುನಾವಣಾ ಕ್ರಮ ತಡೆಗೆ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ವ್ಯಾಪಕ ಕ್ರಮಕೈಗೊಂಡಿದೆ. ಕ್ಷೇತ್ರದಾದ್ಯಂತ 17 ಚೆಕ್‍ಪೋಸ್ಟ್ ತೆರೆಯಲಾಗಿದೆ. 180 ಸೆಕ್ಟರ್ ಅಧಿಕಾರಿಗಳ ನೇಮಿಸಲಾಗಿದೆ' ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್ ತಿಳಿಸಿದ್ದಾರೆ. 

ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಭ್ಯರ್ಥಿಗಳ ಚುನಾವಣಾ ಖರ್ಚುವೆಚ್ಚದ ವಿವರ ಪರಿಶೀಲನೆಗೆ 8 ತಂಡ, 35 ಫ್ಲೈಯಿಂಗ್ ಸ್ಕ್ವಾಡ್, 8 ಎಂಸಿಸಿ ತಂಡ, 27 ವೀಡಿಯೋ ಚಿತ್ರೀಕರಣ ತಂಡ, ಚಿತ್ರೀಕರಣಗೊಂಡ ವೀಡಿಯೋ ಪರಿಶೀಲಿಸಲು 8 ತಂಡಗಳನ್ನು ರಚಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. 

ಹಾಗೆಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ದಿನದ 24 ಗಂಟೆ ಇದು ಕಾರ್ಯನಿರ್ವಹಿಸಲಿದೆ. ಚುನಾವಣಾ ಅಕ್ರಮದ ಕುರಿತಂತೆ ಕಂಟ್ರೋಲ್ ರೂಂಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವ ವ್ಯವಸ್ಥೆ ಮಾಡಲಾಗಿದೆ' ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್‍ರವರು ಮಾಹಿತಿ ನೀಡಿದ್ದಾರೆ. 

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News