ಕೊಡಗು ಪ್ರಕೃತಿ ವಿಕೋಪ: ಸಂತ್ರಸ್ತ ಕುಟುಂಬಗಳ ನೆರವಿಗೆ ಶೀಘ್ರ ಕ್ರಮಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ

Update: 2018-10-11 18:27 GMT

ಮಡಿಕೇರಿ, ಅ.11: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ತುತ್ತಾಗಿರುವ ನಗರ ಪ್ರದೇಶದ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದ್ದಾರೆ.       

ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು ನಿವೇಶನ ರಹಿತರು ಮತ್ತು ಮನೆ ಕಳೆದುಕೊಂಡವರ ಪಟ್ಟಿ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತರಾದ ಎಂ.ಎಲ್.ರಮೇಶ್ ಅವರು ಪ್ರಕೃತಿ ವಿಕೋಪದಿಂದಾಗಿ ಸುಮಾರು 175 ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಇವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.   

ಪ್ರಕೃತಿ ವಿಕೋಪದಿಂದಾಗಿ ಭೂಕುಸಿತ ಉಂಟಾಗಿ ಮನೆ ಹಾನಿ, ರಸ್ತೆ ಹಾನಿ ಹೀಗೆ ಹಲವು ರೀತಿಯ ಸಮಸ್ಯೆಗಳು ಉಂಟಾಗಿದ್ದು, ಈ ಸಂಬಂಧ ಭೂಕುಸಿತವಾಗಿರುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ನಗರೋತ್ಥಾನ ಮೂರನೇ ಹಂತದಲ್ಲಿ ಆರಂಭವಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈಗಾಗಲೇ ನಗರ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಸ್ಥಳದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಕೂಡಲೇ ಸರಿಪಡಿಸುವಂತೆ ಒಳಚರಂಡಿ ಮಂಡಳಿ ಎಂಜಿನಿಯರ್ ಮತ್ತು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ಈಗಾಗಲೇ ನಗರಸಭೆಗೆ ಬಿಡುಗಡೆಯಾಗಿರುವ 2018-19ನೇ ಸಾಲಿನ ಯೋಜನೆಯ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.  

ನಗರದ ಸ್ಟೀವರ್ಟ್ ಹಿಲ್ ಬಳಿ ಕಸವನ್ನು ವ್ಯವಸ್ಥಿತವಾಗಿ ಸಂಸ್ಕರಣೆ ಮಾಡದೆ ಸುತ್ತಮುತ್ತಲಿನ ಕುಟುಂಬಗಳಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕಸ ಸಂಸ್ಕರಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೆಟ್ಟಿರುವ ಯಂತ್ರವನ್ನು ತ್ವರಿತವಾಗಿ ಸರಿಪಡಿಸಿ ಕಸ ಸಂಸ್ಕರಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.    

ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು. 

ಆಸ್ತಿ ತೆರಿಗೆ, ಆದಾಯ ತೆರಿಗೆ, ನೀರಿನ ತೆರಿಗೆಯನ್ನು ಚಾಚು ತಪ್ಪದೇ ವಸೂಲಿ ಮಾಡಬೇಕು. ನಗರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ, ಕಟ್ಟಡಗಳ ಬಾಡಿಗೆ ವೆಚ್ಚವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು. ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ ಅರ್ಹರಿಗೆ ಮನೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.   

ಪೌರಾಯುಕ್ತರಾದ ಎಂ.ಎಲ್.ರಮೇಶ್ ಅವರು ಸ್ಟೀವರ್ಟ್ ಹಿಲ್ ಬಳಿ ಕಸ ಸಂಸ್ಕರಿಸುವ ಯಂತ್ರ ಕೆಟ್ಟು ಹೋಗಿದ್ದು, ಸರಿಪಡಿಸಲಾಗುವುದು. ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕಸ ಸಂಸ್ಕರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕುಡಿಯುವ ನೀರು ಸಂಪರ್ಕ, ಅಡುಗೆ ಅನಿಲ ಸಂಪರ್ಕ, ವೈದ್ಯಕೀಯ ವೆಚ್ಚ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.   

ನಗರಾಭಿವೃದ್ಧಿ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ನಗರಸಭೆಯ ವ್ಯವಸ್ಥಾಪಕ ಸುಜಾತ, ತಾಹಿರ್, ರಮೇಶ್, ಸಿಬ್ಬಂದಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News