ಕೇವಲ ಕಾನೂನು ತಯಾರಿಸಿದರಷ್ಟೇ ಸಾಕೇ?

Update: 2018-10-11 18:42 GMT

ಭಾಗ-4

ಹಿಂದೂ ಕೋಡ್ ಬಿಲ್ ಚರ್ಚೆಗೆ ಬಂದಾಗ ಪಾರ್ಲಿಮೆಂಟಿನ ಕಾರ್ಯ ಸಚಿವ ಹಾಗೂ ಪಕ್ಷದ ಸರಕಾರಿ ಪ್ರತಿನಿಧಿಗಳು ಹಾಜರಿದ್ದು, ಶಿಷ್ಟಾಚಾರದಂತೆ ಚರ್ಚೆಯನ್ನು ಮುಗಿಸಲು ನನಗೆ ನೆರವಾಗುವುದನ್ನು ಬೇಕೆಂದೇ ತಪ್ಪಿಸಿದರು. ಒಂದೊಂದು ಶಬ್ದವನ್ನೂ ಹಿಡಿದು ನಿರರ್ಥಕವಾಗಿ ಚರ್ಚೆ ಶುರುವಾಗಿ ಅದು ಹಲವು ದಿನಗಳವರೆಗೆ ಸಾಗಿತು. ಸರಕಾರದ ವೇಳೆಯನ್ನು ಉಳಿಸುವುದು ಹಾಗೂ ಸರಕಾರದ ಬಿಲ್ಲುಗಳು ಮತ್ತು ಇತರ ಕೆಲಸಗಳು ಹೇಗೆ ಬೇಗನೆ ಮುಗಿದಾವು ಎನ್ನುವತ್ತ ಗಮನ ಹರಿಸುವುದು ಸರಕಾರಿ ಪ್ರತಿನಿಧಿಯ ಕೆಲಸ. ಆದರೆ ಈ ಪ್ರತಿನಿಧಿಯು ವ್ಯವಸ್ಥಿತವಾಗಿ ಹಿಂದಕ್ಕೆ ಸರಿದುಕೊಂಡರು. ಪ್ರಧಾನಿಗೆ ನಿಷ್ಠನಾಗಿರದ ಪ್ರತಿನಿಧಿ ಹಾಗೂ ಇಂತಹ ಪ್ರತಿನಿಧಿಗೆ ನಿಷ್ಠನಾಗಿರುವ ಪ್ರಧಾನಿ ಎಂಬ ಸನ್ನಿವೇಶವನ್ನು ನಾನೆಲ್ಲಿಯೂ ಕಾಣಲಿಲ್ಲ! ಶಿಸ್ತು ಮುರಿಯುವ ಹಾಗೂ ಸಂವಿಧಾನಕ್ಕೆ ತಕ್ಕಂತೆ ನಡೆದುಕೊಳ್ಳದ ಈ ಪ್ರತಿನಿಧಿಯು ಪ್ರಧಾನಮಂತ್ರಿಗೆ ಬಲು ಅಚ್ಚುಮೆಚ್ಚಿನವನಾಗಿದ್ದನು! ಅವನ ಅಶಿಸ್ತಿನ ಈ ನಡುವಳಿಕೆಯನ್ನು ಗಮನಕ್ಕೆ ತಂದುಕೊಳ್ಳುವ ಬದಲು ಅವನಿಗೆ ಪಕ್ಷದಲ್ಲಿ ಭಡ್ತಿ ಸಿಕ್ಕಿತು. ಇಂಥ ಪರಿಸ್ಥಿತಿಯಲ್ಲಿ ಯಾವಾಗಲಾದರೂ ಕೆಲಸವನ್ನು ಮಾಡುವುದು ಅಸಾಧ್ಯವೇ ಸರಿ.

ಹಿಂದೂ ಕೋಡ್ ಬಿಲ್‌ನ ವಿರುದ್ಧ ಬಹುಮತವಿತ್ತೆಂದು ಹೇಳಲಾಗುತ್ತಿದೆ. ಆದರೆ ಎಷ್ಟು ಜನ ಇಂತಹ ವಿರೋಧಕರಿದ್ದರು? ಹಿಂದೂ ಕೋಡ್ ಬಿಲ್ ಕುರಿತು ಪಾರ್ಲಿಮೆಂಟರಿ ಕಾಂಗ್ರೆಸ್ ಪಕ್ಷದಲ್ಲಿ ಹಲವು ಸಲ ಚರ್ಚೆ ನಡೆಯಿತು. ವಿರೋಧಕರು ಮತದಾನದ ಕಾಲಕ್ಕೆ ಕುಸಿದು ಬಿದ್ದರು. ಕಟ್ಟುಕೋಣೆಯಲ್ಲಿ ಅದನ್ನು ಗಮನಕ್ಕೆ ತಂದುಕೊಂಡಾಗ ಪಕ್ಷದ ಒಂದು ನೂರ ಇಪ್ಪತ್ತು ಜನ ಸಂಸದರಲ್ಲಿ ಕೇವಲ ಇಪತ್ತು ಜನರು ಮಾತ್ರ ವಿರೋಧದಲ್ಲಿದ್ದುದು ಕಂಡುಬಂದಿತು. ಅದನ್ನು ಈ ಪಕ್ಷದಲ್ಲಿ ಚರ್ಚೆಗೆ ಎತ್ತಿಕೊಂಡಾಗ ಅದರ ನಲವತ್ನಾಲ್ಕು ಕಲಮುಗಳು ಕೇವಲ ಮೂರುವರೆ ಗಂಟೆಗಳಲ್ಲಿಯೇ ಅಂಗೀಕೃತವಾದವು. ಇದರಿಂದ ಸತ್ತಾಧಾರಿ ಪಕ್ಷದಲ್ಲಿ ಎಷ್ಟು ವಿರೋಧವಿತ್ತೆಂಬುದರ ಕಲ್ಪನೆ ಬರುವುದು!

ಪಾರ್ಲಿಮೆಂಟಿನಲ್ಲಿ ಕೂಡಾ ಎರಡು, ಮೂರು ಹಾಗೂ ನಾಲ್ಕನೆಯ ಕಲಮುಗಳ ಸಂದರ್ಭದಲ್ಲಿ ಮತಗಳು ವಿಭಜಿಸಲ್ಪಟ್ಟವು. ಪ್ರತಿ ಸಲವೂ ಅದು ಪ್ರಚಂಡವಾದ ಮತಗಳಿಂದ ಪಾಸಾಯಿತು. ಹಿಂದೂ ಕೋಡ್ ಬಿಲ್‌ನ ಆತ್ಮವೆನ್ನಿಸಿದ ನಾಲ್ಕನೆಯ ಕಲಮು ಪಾಸಾಯಿತು.
ಹೀಗಿರುವಾಗಲೂ ನಾನು ಪ್ರಧಾನಿಯವರ ವೇಳೆಯ ನೆಪವನ್ನು ಹೇಗೆ ಒಪ್ಪಿಕೊಳ್ಳಲಿ? ನನ್ನ ರಾಜೀನಾಮೆಯನ್ನು ಕುರಿತು ಇಷ್ಟೊಂದು ಸವಿಸ್ತಾರವಾಗಿ ವಿವರಿಸಲು ಕಾರಣವೆಂದರೆ ನಾನು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆಯನ್ನು ಕೊಡುತ್ತಿದ್ದೇನೆಂದು ಕೆಲವರು ವದಂತಿಯನ್ನು ಹುಟ್ಟಿಸಿರುವುದು. ಅನಾರೋಗ್ಯದ ನಿಮಿತ್ತವನ್ನು ಹೇಳಿ ನನ್ನ ಕರ್ತವ್ಯದಿಂದ ತುಸುವೂ ಕದಲುವ ಇಲ್ಲವೇ ಹಿಂಜರಿಯುವ ಮನುಷ್ಯ ನಾನಲ್ಲ.

ನನ್ನ ರಾಜೀನಾಮೆಯು ವಸ್ತುಸ್ಥಿತಿ ತಕ್ಕುವಂತಿಲ್ಲವೆಂದು ಕೆಲವರ ಹೇಳಿಕೆ. ಸರಕಾರದ ವಿದೇಶ ನೀತಿಯಾಗಲಿ ಇಲ್ಲವೇ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ವರ್ತನೆಯಾಗಲಿ ಇಷ್ಟವಾಗದಿದ್ದಲ್ಲಿ ನಾನು ಈ ಮೊದಲೇ ರಾಜೀನಾಮೆಯನ್ನು ಕೊಡಬೇಕಿತ್ತು. ಕೆಲವರಿಗೆ ಈ ಅಪಾದನೆಯು ನಿಜವೆಂದು ತೋರೀತು. ಆದರೆ ರಾಜೀನಾಮೆ ಕೊಡುವುದನ್ನು ಮುಂದೂಡಲು ಕೆಲವು ಬಲವತ್ತರವಾದ ಕಾರಣಗಳಿವೆ. ಒಂದೆಂದರೆ, ನನ್ನ ಸಚಿವ ಪದದ ಹೆಚ್ಚಿನ ವೇಳೆಯು ಭಾರತದ ಸಂವಿಧಾನವನ್ನು ತಯಾರಿಸುವುದರಲ್ಲಿ ಖರ್ಚಾಯಿತು. ನಾನು 26 ಜನವರಿ 1950ರ ವರೆಗೆ ಅದರಲ್ಲಿ ತನ್ಮಯವಾಗಿದ್ದೆ. ತರುವಾಯದಲ್ಲಿ ನಾನು ಜನರ ಪ್ರತಿನಿಧಿತ್ವದ ಬಿಲ್ ಹಾಗೂ ಡೀಲಿಮಿಟೇಶನ್ ಆರ್ಡರ್‌ಗಳ ಕೆಲಸದಲ್ಲಿದ್ದೆ. ಹೀಗಾಗಿ ವಿದೇಶ ನೀತಿಯತ್ತ ಗಮನ ಹರಿಸಲು ನನಗೆ ವೇಳೆ ಸಿಕ್ಕಲಿಲ್ಲ. ಕೈಗೆತ್ತಿಕೊಂಡ ಕಲಸವನ್ನು ಬಿಸುಟಿ ಬೇರೆ ಕಡೆಗೆ ಗಮನ ಹರಿಸುವುದು ಸೂಕ್ತವಾದುದಲ್ಲ.

ನಾನು ಕೇವಲ ಹಿಂದೂ ಬಿಲ್‌ಗೋಸ್ಕರ ಉಳಿದೆ. ಈ ಕಾರಣವು ಕೆಲವರಿಗೆ ತಪ್ಪೆನ್ನಿಸಬಹುದು. ಆದರೆ ನನ್ನ ದೃಷ್ಟಿ ಬೇರೆಯಾಗಿತ್ತು. ಪಾರ್ಲಿಮೆಂಟ್‌ನ ಎದುರಿನ ಹಿಂದೂ ಕೋಡ್ ಬಿಲ್ ಒಂದು ಮಹತ್ವದ ಘಟನೆಯಾಗಿತ್ತು. ಅಲ್ಲದೆ ದೇಶದ ಯಾವುದೇ ಅಧಿವೇಶನದಲ್ಲೂ ಅದನ್ನು ಕುರಿತು ಯೋಚಿಸಲಾಗಿರಲಿಲ್ಲ. ಇಷ್ಟೇ ಅಲ್ಲದೆ ಈ ಮೊದಲಾಗಲಿ ಇಲ್ಲವೇ ಇನ್ನು ಮುಂದೆಯಾಗಲಿ ಪಾರ್ಲಿಮೆಂಟಿನಲ್ಲಿ ಬರುವ ಯಾವುದೇ ಕಾನೂನು ಹಿಂದೂ ಕೋಡ್ ಬಿಲ್‌ನ್ನು ಸರಿಗಟ್ಟದಷ್ಟು ಮಟ್ಟಿಗಿನ ಮಹತ್ವವು ಅದಕ್ಕಿದೆ. ಹಿಂದೂ ಸಮಾಜದ ವರ್ಗ-ವರ್ಗಗಳ ಉಚ್ಚನೀಚತೆ ಮತ್ತು ಲಿಂಗಭೇದಗಳನ್ನು ಉಳಿಸಿಕೊಂಡು ಸುಧಾರಣೆಯ ಯಾವುದೇ ಕಾನೂನನ್ನು ತಯಾರಿಸುವುದೆಂದರೆ ಹೊಲಸನ್ನು ತೆಗೆಯದೆ ಅದರ ಮೇಲೆಯೇ ಇಸ್ಪೀಟುಗಳ ಬಂಗ್ಲೆಯನ್ನು ಕಟ್ಟಿದಂತೆ! ಇದಾದರೆ ಸಂವಿಧಾನದ ಅಪಹಾಸ್ಯ. ಇದರಿಂದ, ನಾನು ಹಿಂದೂ ಬಿಲ್ಲಿಗೆ ಇಷ್ಟೊಂದು ಮಹತ್ವ ವನ್ನೇಕೆ ನೀಡುತ್ತೇನೆ, ಎನ್ನುವುದರ ಕಲ್ಪನೆ ಬಂದೀತು. ಹೀಗಾಗಿ ನಾನು ತೀವ್ರವಾದ ಭಿನ್ನಾಭಿಪ್ರಾಯಗಳಿರುವಾಗಲೂ ಸಚಿವ ಸಂಪುಟದಲ್ಲಿ ಉಳಿದೆ. ಇದರಲ್ಲಿ ನಾನೇನಾದರೂ ತಪ್ಪು ಮಾಡಿದ್ದರೆ ಅದು ಒಂದು ಘನವಾದ ಮತ್ತು ಒಳ್ಳೆಯ ಕೆಲಸಕ್ಕಾಗಿಯೇ ಸರಿ. ಹಿಂದೂ ಕೋಡ್ ಬಿಲ್‌ನ್ನು ವಿರೋಧಿಸುವವರನ್ನು ಪೇಚಿಗೆ ಸಿಕ್ಕಿಸುವ ಹುಮ್ಮಸ್ಸು ನನ್ನಲ್ಲಿ ಇರಲಿಕ್ಕಿಲ್ಲವೇ? ಪ್ರಧಾನಿಯವರು ಪಾರ್ಲಿಮೆಂಟಿನಲ್ಲಿ ಇದನ್ನು ಕುರಿತು ಮೂರು ಸಲ ನೀಡಿದ ವಿವರಣೆಯತ್ತ ಎಲ್ಲರ ಗಮನವನ್ನು ಸೆಳೆಯಬಯಸುತ್ತೇನೆ.

ತಾ. 28 ನವೆಂಬರ್ 1949ರಂದು ಪ್ರಧಾನಿಯವರು, ‘‘ಸರಕಾರವು ಹಿಂದೂ ಕೋಡ್ ಬಿಲ್‌ನ್ನು ಪಾಸ್ ಮಾಡಲು ನಿರ್ಧರಿಸಿದೆ. ಅದು ಆ ದಾರಿಯಲ್ಲಿದೆ...... ಸರಕಾರ ಅದನ್ನು ಪಾಸ್ ಮಾಡಿಸಿಕೊಳ್ಳಲಿದೆ. ಆದರೆ ಈ ಅಧಿಕಾರವು ಪಾರ್ಲಿಮೆಂಟಿನದು. ಸರಕಾರವು ಮಂಡಿಸಿದ ಮಹತ್ವದ ಬಿಲ್‌ಗೆಪಾರ್ಲಿಮೆಂಟು ಒಪ್ಪಿಗೆಯನ್ನು ನೀಡದಿದ್ದರೆ ಪಾರ್ಲಿಮೆಂಟಿಗೆ ಸದ್ಯದ ಸರಕಾರ ಬೇಡವಾಗಿದೆ ಎಂಬುದು ಅದರ ಸ್ಪಷ್ಟವಾದ ಅರ್ಥ. ಹೊಸ ಸರಕಾರವೇನೋ ಆ ಸ್ಥಾನ ತುಂಬುವುದು. ಆದುದರಿಂದ ಹಿಂದೂ ಕೋಡ್ ಬಿಲ್ ಒಂದು ಮಹತ್ವದ ಬಿಲ್ ಆಗಿದ್ದು ಸರಕಾರದ ಅಸ್ತಿತ್ವವು ಅದನ್ನು ಅವಲಂಭಿಸಿದೆ. ಅದು ಸರಕಾಕ್ಕೆ ಅಷ್ಟೊಂದು ಮಹತ್ವದ್ದಾಗಿ ಕಾಣುತ್ತದೆ.’’

ಇದಾದ ಬಳಿಕ, ತಾ. 19 ಡಿಸೆಂಬರ್ 1949ರಲ್ಲಿ ಪ್ರಧಾನಿಯವರು, ‘‘ಸರಕಾರವು ಹಿಂದೂ ಕೋಡ್ ಬಿಲ್ಲಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಿಲ್ಲವೆಂದು ಯಾರೂ ತಪ್ಪಾಗಿ ಭಾವಿಸಕೂಡದು. ಈ ಬಿಲ್ ಸರಕಾರಕ್ಕೆ ತುಂಬ ಮಹತ್ವದ್ದೆನ್ನಿಸಲು ಕಾರಣ ಅದರ ಕೆಲವು ವಿಶಿಷ್ಟ ಕಲಮುಗಳಲ್ಲ, ಬದಲು ಅದು ಆರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಮೂಲಭೂತವಾಗಿ ಗುರುತಿಸಿದೆ, ಎಂಬುದು. ನಾವು ಪರಕೀಯರಿಂದ ಬಿಡುಗಡೆ ಹೊಂದಿ ರಾಜಕೀಯ ಸ್ವಾತಂತ್ರವನ್ನು ಪಡೆದೆವು. ಸ್ವಾತಂತ್ರದ ಈ ಪ್ರಯಾಣದಲ್ಲಿ ಹಲವು ಹಂತಗಳಿವೆ. ಆರ್ಥಿಕ ಹಾಗೂ ಸಾಮಾಜಿಕವಾದವಂತೂ ಮಹತ್ವದವುಗಳು. ಇವೆಲ್ಲ ಮಂಚೂಣಿಗಳಲ್ಲಿ ಪುರೋಗಾಮಿಯಾದ ಪ್ರಗತಿ ಆಗಬೇಕಿದೆ. ಅಂದರೇನೆ ಸಮಾಜ ಸುಧಾರಿಸುವುದು.’’

ತಾ. 26 ಸೆಪ್ಟೆಂಬರ್ 1951ರಲ್ಲಿ ಮತ್ತೆ ಪ್ರಧಾನಿಯವರು ಹೀಗೆನ್ನುತ್ತಾರೆ:
‘‘ಈ ಬಿಲ್ ಚರ್ಚೆಗೆ ಬರಬೇಕು. ಅದು ಪ್ರಗತಿ ಹೊಂದುತ್ತ ಹೋಗುವುದು ಸರಕಾರಕ್ಕೆ ಬೇಕಿದೆ ಎಂಬ ಬಗೆಗೆ ಸರಕಾರವು ಪ್ರತ್ಯೇಕವಾಗಿ ಭರವಸೆಯನ್ನು ನೀಡುವ ಕಾರಣವಿಲ್ಲ. ಸಾಧ್ಯವಿದ್ದ ಮಟ್ಟಿಗೆ ಪ್ರಗತಿಯನ್ನು ಹೊಂದುವುದು ಆವಶ್ಯಕ. ಆದರೆ ಸದ್ಯಕ್ಕೆ ಅದನ್ನು ಕುರಿತಾದ ಚರ್ಚೆಯನ್ನು ನಿಲ್ಲಿಸಬೇಕೆಂದು ನಮಗೆ ಅನ್ನಿಸುತ್ತದೆ. ಮುಂದೆ ಅವಕಾಶ ಸಿಕ್ಕುತ್ತಲೇ ಅದನ್ನು ಚರ್ಚೆಗೆ ಎತ್ತಿಕೊಳ್ಳಬೇಕು. ಅಂದರೆ, ಅದು ಇದೇ ಪಾರ್ಲಿಮೆಂಟಿನಲ್ಲಿ ಪಾಸಾಗುವುದು.’’

ಬಿಲ್‌ನ್ನು ಮುಂದಿರಿಸಿದ ತರುವಾಯ ಪ್ರಧಾನಿಯವರು ಈ ಭರವಸೆಯನ್ನು ನೀಡಿದರು. ಪ್ರಧಾನಿಯವರ ಈ ಭರವಸೆಯನ್ನು ಯಾರು ತಾನೆ ನಂಬಲಿಕ್ಕಿಲ್ಲ? ಪ್ರಧಾನಿಯವರ ಭರವಸೆಗಳು ಹಾಗೂ ಪ್ರಾತ್ಯಕ್ಷಿಕೆಗಳಲ್ಲಿ ವ್ಯತ್ಯಾಸವಿರುವುದು ನನಗೆ ಕಂಡರೆ ಆ ಅಪರಾಧ ನನ್ನದಂತೂ ಅಲ್ಲ. ನಾನು ಸಚಿವ ಸಂಪುಟದಿಂದ ಹೊರಗೆ ಹೋಗುವುದು ಯಾರಿಗೂ ಅಷ್ಟೊಂದು ಮಹತ್ವದ್ದಾಗಿ ಕಾಣಲಿಕ್ಕಿಲ್ಲ. ಆದರೆ ನಾನು ಸತ್ಯಕ್ಕೆ ನಿಷ್ಠನಾಗಿದ್ದರೆ ಇಲ್ಲಿಂದ ಹೊರ ಬೀಳುವುದೇ ಸೂಕ್ತ. ಅದಕ್ಕೂ ಮುನ್ನ, ನನ್ನ ಸಹಕಾರಿಗಳು ನಮಗೆ ತೋರಿದ ಪ್ರೀತಿ ಹಾಗೂ ಶಿಷ್ಟಾಚಾರಗಳಿಗಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ನನ್ನ ಪಾರ್ಲಿಮೆಂಟ್ ಸದಸ್ಯತ್ವವನ್ನು ಉಳಿಸಿಕೊಳ್ಳುವೆನು. ಪಾರ್ಲಿಮೆಂಟಿನ ಸದಸ್ಯರು ನನ್ನ ಬಗೆಗೆ ತೋರಿದ ಸಹನೆಯನ್ನು ಕುರಿತು ಅವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News