ಎಲಿವೆಡೆಟ್ ಕಾಡಿಡಾರ್ ನಿರ್ಮಾಣಕ್ಕೆ ರಾಜ್ಯ ಸರಕಾರದ ಸ್ಪಷ್ಟ ವಿರೋಧವಿದೆ: ಸಚಿವ ಶಂಕರ್

Update: 2018-10-12 14:14 GMT

ಬೆಂಗಳೂರು, ಅ. 12: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ ಎಂದು ಅರಣ್ಯ ಸಚಿವ ಆರ್.ಶಂಕರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೇರಳ ಸರಕಾರ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾದುಹೋಗುವ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೇಂದ್ರ ಸರಕಾರದ ವೇಳೆ ಒತ್ತಡ ಹೇರುತ್ತಿದೆ. ಆದರೆ, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಹಾಗೂ ಎಲಿವೆಡೆಟ್ ಕಾಡಿಡಾರ್ ನಿರ್ಮಾಣಕ್ಕೆ ರಾಜ್ಯ ಸರಕಾರದ ಸ್ಪಷ್ಟ ವಿರೋಧವಿದೆ ಎಂದು ಹೇಳಿದರು.

ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ರಾಜ್ಯದ ನಿಲುವು ತಿಳಿಸಲು ಸಮರ್ಥ ವಕೀಲರನ್ನು ನೇಮಿಸಲಾಗುವುದು. ಅಲ್ಲದೆ, ಕೋರ್ಟ್‌ಗೆ ರಾಜ್ಯ ಸರಕಾರದ ನಿರ್ಧಾರವನ್ನು ತಿಳಿಸಲಾಗುವುದು. ಎಲಿವೆಟೆಡ್ ಕಾರಿಡಾರ್ ನಿರ್ಮಾಣದಿಂದ ಪರಿಸರ ಮತ್ತು ವನ್ಯಜೀವಿಗ ಮುಕ್ತ ಸಂಚಾರಕ್ಕೆ ದಕ್ಕೆಯಾಗಲಿದೆ ಎಂದರು.

ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಗೊಂದಲ ಮತ್ತು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿದ್ದೇವೆ ಎಂದ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ, ಪ್ರವಾಹದಿಂದ ಅರಣ್ಯ ಪ್ರದೇಶ ಹಾನಿಯಾಗಿದ್ದು, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಉಪ ಚುನಾವಣೆ ಬಳಿಕ ಕಾಂಗ್ರೆಸ್ ಸೇರ್ಪಡೆ

‘ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆ ಬಳಿಕ ತಾನು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವೆ. ಸಚಿವ ಮಹೇಶ್ ರಾಜೀನಾಮೆ ಅವರ ವೈಯಕ್ತಿಕ ವಿಚಾರ’

-ಆರ್.ಶಂಕರ್ ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News