×
Ad

ನಾಲ್ವರು ಅಂತರಾಜ್ಯ ಗಾಂಜಾ ಮಾರಾಟಗಾರರ ಬಂಧನ: 7.15 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2018-10-12 20:10 IST

ದಾವಣಗೆರೆ,ಅ.12: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಅಂತರಾಜ್ಯ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 7.15 ಲಕ್ಷ ರೂ. ಮೌಲ್ಯದ 28 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಆರ್. ಚೇತನ್, ಬಂಧಿತ ಆರೋಪಿಗಳಾದ ಸುಧಾಕರ್, ರಾಜೇಶ್, ಮುನ್ನಯ್ಯ, ಶೇಖ್ ಬಾಬಾ ಇವರೆಲ್ಲರೂ ಆಂದ್ರಪ್ರದೇಶದ ಕಡಪ ಜಿಲ್ಲೆಯವರು. ಇವರ ಜೊತೆ ತರಪನಾಥ್ ಎಂಬ ವ್ಯಕ್ತಿ ಇದ್ದು, ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದರು. 

ಘಟನೆ ವಿವರ: ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಅಜ್ಜಿಹಳ್ಳಿ ಸರ್ಕಲ್ ಬಳಿಯ ಬಸ್ ನಿಲ್ದಾಣದಲ್ಲಿ ನಾಲ್ಕು ಬಟ್ಟೆ ಬ್ಯಾಗ್‍ಗಳಲ್ಲಿ ವಸ್ತುಗಳನ್ನಿಟ್ಟುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪಿಎಸ್‍ಐ ಶಿವರುದ್ರಪ್ಪ ಎಸ್ ಮೇಟಿ ನೇತೃತ್ವದಲ್ಲಿ ದಾಳಿ ನಡೆಸಿದಾಗ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಈ ವ್ಯಕ್ತಿಗಳು ಕಳೆದ ಸುಮಾರು ದಿನಗಳಿಂದ ಈ ದಂಧೆ ನಡೆಸುತ್ತಿದ್ದು, ದಾವಣಗೆರೆ, ಭದ್ರಾವತಿ, ಶಿವಮೊಗ್ಗ, ಹೊಳಲ್ಕೆರೆ, ಚನ್ನಗಿರಿ ಮುಂತಾದ ಕಡೆಗಳಲ್ಲಿ ಈ ದಂಧೆ ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಂತಾರಾಜ್ಯ ಗಾಂಜಾ ಮಾರಾಟ ಪ್ರಕರಣ ದಾಖಲಾಗಿದೆ ಎಂದು ಅವರು ವಿವರಿಸಿದರು.

ಮಾದಕ ವಸ್ತುಗಳಾದ ಗಾಂಜಾ, ಅಫೀಮುಗಳ ಬಗ್ಗೆ ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರೂ ಮಾಹಿತಿ ನೀಡುವ ಮೂಲಕ ಸಹಕರಿಸುತ್ತಿದ್ದಾರೆ ಎಂದರು.

ಇತ್ತೀಚೆಗೆ ದಾವಣಗೆರೆ ಹದಡಿ ರಸ್ತೆಯಲ್ಲಿ ನಡೆದ ಸಂಚಾರಿ ಪೊಲೀಸರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವೈದ್ಯರ ವರದಿ ಬಂದ ನಂತರ ಮುಂದಿನಕ್ರಮ ಕೈಗೊಳ್ಳಲಾಗುವುದೆಂದು ಎಸ್ಪಿ ಚೇತನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಡಿವೈಎಸ್‍ಪಿ ಎಂ.ಕೆ. ಗಂಗಲ್, ಸಿಪಿಐಗಳಾದ ಗಜೇಂದ್ರಪ್ಪ ಗುರುಬಸವರಾಜ್ ಹಾಗೂ ಸಿಬ್ಬಂದಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News