ಯುವಕರ ಕೈಗೆ ಕತ್ತಿ ಕೊಟ್ಟಿದ್ದೇ ಅನಂತಕುಮಾರ್ ಹೆಗಡೆ ಸಾಧನೆ: ಆನಂದ ಅಸ್ನೋಟಿಕರ್

Update: 2018-10-12 17:08 GMT

ಕಾರವಾರ, ಅ.12: ಸಮಾಜ ಒಡೆಯುವ ಹೇಳಿಕೆ ನೀಡುತ್ತಾ, ಉಡಾಫೆ ಮಾತನಾಡುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರಿಗೆ ಜನತೆ ರಾಜಕೀಯವಾಗಿ ಬಹಿಷ್ಕಾರ ಹಾಕಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಧುರೀಣ ಆನಂದ ಅಸ್ನೋಟಿಕರ್ ಕಿಡಿ ಕಾರಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯಕ್ಕೆ ಸಮಾಜ ಸೇವೆ ಮಾಡಲು ಅಲ್ಲ. ಬದಲಾಗಿ ರಾಜಕೀಯ ಮಾಡಲು ಬಂದಿದ್ದೇನೆ ಎನ್ನುವ ಕೇಂದ್ರ ಸಚಿವರ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ರಾಜಕಾರಣದ ಬುನಾದಿಯೇ ಸಮಾಜಸೇವೆ ಎನ್ನುವುದು ಹೆಗಡೆ ತಿಳಿಯಬೇಕಿದೆ. ಈ ಹಿಂದೆ ತಾನು ಕೇಂದ್ರ ಸಚಿವ ಹೆಗಡೆ ಒಬ್ಬ ನಾಲಾಯಕ್, ಲೋಫರ್ ವ್ಯಕ್ತಿ ಎಂದು ಹೇಳಿದ್ದೇನೆ. ಈಗಲೂ ತನ್ನ ಆ ಮಾತಿಗೆ ತಾನು ಬದ್ಧನಾಗಿದ್ದೇನೆ ಎಂದರು.

ಅಂಕೋಲಾದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರದ ಕಚೇರಿಯನ್ನು ತರುತ್ತೇನೆ ಎಂದು ಹೆಗಡೆ ಈ ಹಿಂದೆ ಭರವಸೆ ನೀಡಿದ್ದರು. ಹೆಗಡೆಯವರಲ್ಲಿ ಬದ್ಧತೆ ಇದ್ದರೆ ಕಚೇರಿ ತರಲಿ ಎಂದು ಸವಾಲು ಹಾಕಿದರು. ಅಭಿವೃದ್ಧಿ ಎಂದಿಗೂ ಹೆಗಡೆಯವರಿಂದ ಸಾಧ್ಯವಿಲ್ಲ ಎಂದು ಅಸ್ನೋಟಿಕರ್ ತಿರುಗೇಟು ನೀಡಿದರು.

‘ಯುವಕರ ಕೈಗೆ ಕತ್ತಿ ಕೊಟ್ಟಿದ್ದೇ ಹೆಗಡೆ ಸಾಧನೆ’
ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, ಹೆಗಡೆ ಮತ್ತೆ ಯುವಕ ಪರೇಶ ಮೇಸ್ತನ ಸಾವಿನ ಹೆಸರಿನಲ್ಲಿ ಮತ ಕೇಳಲು ಸಿದ್ಧವಾಗುತ್ತಿದ್ದಾರೆ. ಕಳೆದ ಐದು ಬಾರಿ ಸುದೀರ್ಘ ಅವಧಿಗೆ ಸಂಸದರಾಗಿರುವ ಹೆಗಡೆ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಯೋಜನೆ ತರಲು ವಿಫಲವಾಗಿದ್ದಾರೆ. ಕರಾವಳಿಯ ಮೀನುಗಾರರ ಸಮಸ್ಯೆಗಳಿಗೆ, ಅವರ ನೋವುಗಳಿಗೆ ಹೆಗಡೆ ಕಿಂಚಿತ್ತೂ ಸ್ಪಂದಿಸಿಲ್ಲ. ಕೇವಲ ಹಿಂದುಳಿದ ವರ್ಗಗಳ ಯುವಕರ ಕೈಗೆ ಕತ್ತಿ ಕೊಟ್ಟಿದ್ದೇ ಅವರ ಪ್ರಮುಖ ಸಾಧನೆ ಎಂದು ಅಸ್ನೋಟಿಕರ್ ತೀವ್ರವಾಗಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News