ಶಿವಮೊಗ್ಗ: ಬಿಜೆಪಿ ಕಾರ್ಪೋರೇಟರ್ ವಿರುದ್ಧ ಎಫ್‍ಐಆರ್

Update: 2018-10-12 17:16 GMT

ಶಿವಮೊಗ್ಗ, ಅ. 12: ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರೊಂದಿಗೆ ಮೊಬೈಲ್ ಪೋನ್ ಮೂಲಕ ಬೆದರಿಕೆ ಹಾಕುವ ಸ್ವರೂಪದಲ್ಲಿ ಮಾತನಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಕಾರ್ಪೋರೇಟರ್ ಚೆನ್ನಬಸಪ್ಪ (ಚೆನ್ನಿ) ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.  

ಇತ್ತೀಚೆಗೆ ಆಯುಕ್ತೆ ಚಾರುಲತಾ ಸೋಮಲ್‍ರವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾರಕ್ಷಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು. ಮಾನಸಿಕ ಖಿನ್ನತೆ ಉಂಟು ಮಾಡುವ ರೀತಿಯಲ್ಲಿ ಹಾಗೂ ಉಪ ಚುನಾವಣಾ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ, ತನ್ನೊಂದಿಗೆ ಮಾತನಾಡಿರುವ ಚೆನ್ನಬಸಪ್ಪ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಅದರಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಚೆನ್ನಬಸಪ್ಪ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಪಾಲಿಕೆ ಕಚೇರಿಗೂ ಭೇಟಿಯಿತ್ತು ಮಾಹಿತಿ ಕಲೆ ಹಾಕಿದ್ದು, ಚೆನ್ನಬಸಪ್ಪರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಘಟನೆ ಹಿನ್ನೆಲೆ: ಲೋಕಸಭೆ ಉಪ ಚುನಾವಣಾ ಮಾದರಿ ನೀತಿ-ಸಂಹಿತೆ ಕಾರ್ಯಗತಗೊಂಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮಹಾನಗರ ಪಾಲಿಕೆ ಆಡಳಿತ ಆಯೋಜಿಸಿದ್ದ ದಸರಾ ಸಂಬಂಧಿತ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿತ್ತು. ದಸರಾ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಗಳನ್ನು ಕೂಡ ವಿಸರ್ಜಿಸಲಾಗಿತ್ತು. 
ದಸರಾ ಆಚರಣೆ ಕುರಿತಂತೆ ಚೆನ್ನಬಸಪ್ಪರವರು ಆಯುಕ್ತೆಯ ಮೊಬೈಲ್ ಪೋನ್‍ಗೆ ಕರೆ ಮಾಡಿ ಮಾತನ್ನಾಡಿದ್ದರು. ಈ ವೇಳೆ ಆಯುಕ್ತೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಏರುಧ್ವನಿಯಲ್ಲಿ ಸಂಭಾಷಿಸಿದ್ದರು ಎನ್ನಲಾಗಿದೆ. 

ಇದರಿಂದ ಅಸಮಾಧಾನಗೊಂಡ ಆಯುಕ್ತೆ ಚಾರುಲತಾರವರು, ಸಹಾಯಕ ಚುನಾವಣಾಧಿಕಾರಿಯಾಗಿರುವ ತಮ್ಮೊಂದಿಗೆ ಮಾನಸಿಕ ಖಿನ್ನತೆ ಉಂಟಾಗುವ ರೀತಿಯಲ್ಲಿ ಚೆನ್ನಬಸಪ್ಪ ಮಾತನಾಡಿದ್ದಾರೆ. ತಮ್ಮ ಚುನಾವಣಾ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡಲು ಯತ್ನಿಸಿದ್ದಾರೆ. ಇವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಡಿಸಿ-ಎಸ್.ಪಿ.ಗೆ ದೂರು ಸಲ್ಲಿಸಿದ್ದರು. 

ರಾಜಕೀಯ ಮಾಡಲು ಬಂದಿಲ್ಲ
ಲೋಕಸಭೆ ಉಪ ಚುನಾವಣೆ ನೀತಿ-ಸಂಹಿತೆ ಅನುಷ್ಠಾನದಲ್ಲಿರುವುದರಿಂದ, ಚುನಾವಣಾ ಆಯೋಗದ ನಿರ್ದೇಶನದಂತೆ ನಿಯಮಾನುಸಾರ ದಸರಾ ಆಚರಣೆಗೆ ಕ್ರಮಕೈಗೊಳ್ಳಲಾಗಿದೆ. ತಮ್ಮೊಂದಿಗೆ ಅವರು (ಚೆನ್ನಬಸಪ್ಪ) ಮೊಬೈಲ್‍ನಲ್ಲಿ ಮಾತನಾಡಿದ್ದ ವಿಷಯದ ಕುರಿತಂತೆ ದೂರು ನೀಡಿದ್ದೇನೆ. ಯಾವುದೇ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯ ಮಾಡಲು ತಾನು ಇಲ್ಲಿಗೆ ಬಂದಿಲ್ಲ. ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಲಾರೆ ಎಂದು ಆಯುಕ್ತೆ ಚಾರುಲತಾ ಸೋಮಲ್‍ರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

ದೂರು ನೀಡಿದ್ದು ಸರಿಯಲ್ಲ : ಕಾರ್ಪೋರೇಟರ್ ಚೆನ್ನಬಸಪ್ಪ
'ದಸರಾ ಹಬ್ಬಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತೆಯ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದೆ. ಈ ಹಿಂದಿನ ರೀತಿಯಲ್ಲಿ ಸಾಂಸ್ಕೃತಿಕವಾಗಿ ಹಬ್ಬ ಆಚರಣೆ ಮಾಡುವಂತೆ ಒತ್ತಿ ಹೇಳಿದ್ದೆ. ಆದರೆ ಈ ಬಗ್ಗೆಯೇ ತಮ್ಮ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಶನಿವಾರ ಬಿಜೆಪಿ ಕಾರ್ಪೋರೇಟರ್ ಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಲಿದ್ದೇವೆ' ಎಂದು ಕಾರ್ಪೋರೇಟರ್ ಚೆನ್ನಬಸಪ್ಪರವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News