ದೇವೇಗೌಡ ಕುಟುಂಬದ ವಿರುದ್ಧದ ಮಾಧ್ಯಮ ವರದಿ ಸತ್ಯಕ್ಕೆ ದೂರ: ಸಚಿವ ರೇವಣ್ಣ

Update: 2018-10-12 18:21 GMT

ತುಮಕೂರು,ಅ.12: ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಸುದ್ದಿಯನ್ನು ಸೃಷ್ಟಿಸಿ ಅಪಪ್ರಚಾರ ಮಾಡಬೇಡಿ ಎಂದು ಲೋಕೋಪಯೋಗಿ ಸಚಿವ ಹಾಗೂ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಡಿ. ರೇವಣ್ಣ ಮಾಧ್ಯಮಗಳಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜಕೀಯ ದುರುದ್ದೇಶದಿಂದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬದ ಮೇಲೆ ಕೆಲವರು ಇಲ್ಲಸಲ್ಲದ ಆರೋಪ ಹೊರಿಸುವುದು ಸರಿಯಲ್ಲ. ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಯದಿರುವುದಕ್ಕೆ ದೇವೇಗೌಡ ಮತ್ತು ಕುಟುಂಬದವರೇ ಕಾರಣ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟ ಪಡಿಸಿದರು. 

ತಮ್ಮ ದೃಷ್ಟಿಯಲ್ಲಿ ಹೇಮಾವತಿ ನೀರು ಹರಿಯುವ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳೆಲ್ಲ ಒಂದೇ. ಹಾಸನ ಜಿಲ್ಲೆಗಿಂತ ತುಮಕೂರಿಗೆ ಬಹುಪಾಲು ನೀರು ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ನಾಲಾ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲವಾದ್ದರಿಂದ ಜಿಲ್ಲೆಯ ಜನತೆಗೆ ಹೇಮಾವತಿ ನೀರಿನ ಸದ್ಬಳಕೆಯಾಗುತ್ತಿಲ್ಲ. ದೇವೇಗೌಡ ಅವರ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿದ ಜಿಲ್ಲೆಯ ಮೇಲೆ ತಮಗೆ ಅಪಾರ ಗೌರವವಿದೆ. ಜಿಲ್ಲೆಗೆ ಹೇಮಾವತಿ ನೀರು ಸದ್ಬಳಕೆಯಾಗುವಂತೆ ಮಾಡಲು ನಾನು ಸದಾ ಕಟಿಬದ್ಧನಾಗಿರುತ್ತೇನೆ ಎಂದು ತಿಳಿಸಿದರಲ್ಲದೆ ಜಿಲ್ಲೆಯ ನೀರಾವರಿ ಸೌಲಭ್ಯ, ಕುಡಿಯುವ ನೀರಿನ  ಅಗತ್ಯನುಗುಣವಾಗಿ ನೀರನ್ನು ಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. 

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಸತತ ಬರಗಾಲದಿಂದ ರಾಜ್ಯದಲ್ಲಿ 50ಲಕ್ಷ ತೆಂಗಿನ ಗಿಡಗಳು ಹಾಳಾಗಿದ್ದು, ಬೆಳೆನಷ್ಟ ಪರಿಹಾರವಾಗಿ 200 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು  ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಸರಕಾರ ಇನ್ನೂ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಅವರು ತಮ್ಮ ಅಧಿಕಾರಾವಧಿಯನ್ನು ಉತ್ತಮವಾಗಿ ನಿರ್ವಹಿಸಿದ್ದು, ರಾಜ್ಯದ ಜನತೆಯ ಮನಗೆದ್ದಿದ್ದಾರೆ. ಕಳೆದ ನಾಲ್ಕೈದು ತಿಂಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 450 ಕೋಟಿ ರೂ.ಗಳ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದಾರೆ ಎಂದು ಸಚಿವ ಮಹೇಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮಹೇಶ್ ಅವರ ರಾಜೀನಾಮೆ ಅಂಗೀಕೃತವಾದರೆ ತೆರವಾದ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುವ ತೀರ್ಮಾನವನ್ನು ಹಿರಿಯ ಮುಖಂಡರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News