ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲು: 5 ಲಕ್ಷ ರೂ. ಮಾನನಷ್ಟ ಪರಿಹಾರ ನೀಡಲು ಆದೇಶ

Update: 2018-10-12 18:27 GMT
ಎಂ.ಪಿ.ಅರುಣ್‍ಕುಮಾರ್

ಮಂಡ್ಯ, ಅ.12: ಗಣ್ಯ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿದ ಕಾರಣಕ್ಕೆ ಡಿವೈಎಸ್ಪಿ ಮತ್ತು ಸಿಪಿಐ ಆ ಗಣ್ಯ ವ್ಯಕ್ತಿಗೆ 5 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಪಿ.ಅರುಣ್‍ಕುಮಾರ್ ಅವರಿಗೆ ಈ ಹಿಂದೆ ಶ್ರೀರಂಗಪಟ್ಟಣ ಡಿವೈಎಸ್ಪಿ ಆಗಿದ್ದ ಗೀತಾ ಪ್ರಸನ್ನ ಹಾಗೂ ಸಿಪಿಐ ಆಗಿದ್ದ ಅರುಣ್ ನಾಗೇಗೌಡ ಅವರು  5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪರಿಹಾರದ ಜತೆಗೆ 2.80 ಲಕ್ಷ ರೂ. ನ್ಯಾಯಾಯಲದ ವೆಚ್ಚ ಭರಿಸುವಂತೆಯೂ ಆದೇಶಿಸಲಾಗಿದೆ.

ಪ್ರಸ್ತುತ ಗೀತಾ ಪ್ರಸನ್ನ ಚಾಮರಾಜನಗರದ ಎಎಸ್ಪಿಯಾಗಿ, ಅರುಣ್ ನಾಗೇಗೌಡ ಬೆಳಗಾಂನಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಅಂಡ್ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ವೀರಣ್ಣ ಸೋಮಶೇಖರ್ ಈ ಆದೇಶ ನೀಡಿದ್ದಾರೆ. ತೀರ್ಪು ನೀಡಿದ 90 ದಿನದಲ್ಲಿ ಪರಿಹಾರ ಪಾವತಿಸಬೇಕು ಎಂದೂ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 2013ರಲ್ಲಿ ಅಂದಿನ ಮಂಡ್ಯ ನಗರಸಭಾಧ್ಯಕ್ಷ ಎಂ.ಪಿ.ಅರುಣ್‍ಕುಮಾರ್ ಮತ್ತು ಇತರರನ್ನು ಶ್ರೀರಂಗಪಟ್ಟಣದ ಲಾಜ್ ಹೊಂದರಲ್ಲಿ ಡಿವೈಎಸ್ಪಿ ಎಂ.ಎಸ್.ಗೀತ ಹಾಗೂ ಸಿಪಿಐ ಅರುಣ್ ನಾಗೇಗೌಡ ದಾಳಿ ನಡೆಸಿ ಬಂಧಿಸಿದ್ದರು.

ಅರುಣ್‍ಕುಮಾರ್ ಮತ್ತು ಇತರರಿಂದ 25 ಲಕ್ಷ ರೂ. ವಶಪಡಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳು, ಹಣವನ್ನು ದ್ವಿಗುಣಗೊಳಿಸುವ ದಂಧೆಯಲ್ಲಿ ಅರುಣ್‍ಕುಮಾರ್ ಮತ್ತು ಸಹಚರರು ತೊಡಗಿದ್ದರು ಎಂದು ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು.
ಈ ಸಂಬಂಧ ವಿಚಾರಣೆ ನಡೆದು, ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಕೆಲವರ ಸಂಚಿನಿಂದ ತಮ್ಮನ್ನು ಬಂಧಿಸಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ಇದರಲ್ಲಿ ಡಿವೈಎಸ್ಪಿ, ಸಿಪಿಐ ಭಾಗಿಯಾಗಿದ್ದಾರೆ ಎಂದು ಅರುಣ್‍ಕುಮಾರ್ ವಾದಿಸಿದ್ದರು. ವಿಚಾರಣೆ ನಡೆದು ಪ್ರಕರಣ ಖುಲಾಸೆಯಾಗಿತ್ತು.
ನಂತರ, ಅರುಣ್‍ಕುಮಾರ್, ತಾನು ಗಣ್ಯ ವ್ಯಕ್ತಿಯಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿದ್ದೆ. ಇದನ್ನು ಸಹಿಸದ ಕೆಲವು ರಾಜಕೀಯ ವ್ಯಕ್ತಿಗಳು ಸಂಚುಹೂಡಿ ಬಂಧನಕ್ಕೆ ಕಾರಣವಾಗಿದ್ದಾರೆ. ಇದರಲ್ಲಿ ಡಿವೈಎಸ್ಪಿ, ಸಿಪಿಐ ಭಾಗಿಯಾಗಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಮಾನಹಾನಿಯಾಗಿದೆ. ಆದ್ದರಿಂದ 1 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಡಿವೈಎಸ್ಪಿ ಗೀತ ಹಾಗೂ ಸಿಪಿಐ ಅರುಣ್ ನಾಗೇಗೌಡ ವಿರುದ್ಧ ನೀಡಿದ್ದರು.

ಈ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿದ ಶ್ರೀರಂಗಪಟ್ಟಣದ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಅಂಡ್ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ವೀರಣ್ಣ ಸೋಮಶೇಖರ್ ಅವರು, ಪೊಲೀಸ್ ಅಧಿಕಾರಿಗಳಿಬ್ಬರೂ 5 ಲಕ್ಷ ರೂ.ಗಳನ್ನು ಮಾನನಷ್ಟವನ್ನು ಅರುಣ್‍ಕುಮಾರ್ ಗೆ ಕಟ್ಟಿಕೊಡುವಂತೆ ಆದೇಶ ನೀಡಿದ್ದಾರೆ.

ಮೇಲ್ಮನವಿ ಸಲ್ಲಿಸುವೆ: ತೀರ್ಪಿನ್ನು ಸ್ವಾಗತಿಸಿರುವ ಎಂ.ಪಿ.ಅರುಣ್‍ಕುಮಾರ್, ಆದರೆ, ನ್ಯಾಯಾಲಯ 5 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ಆದೇಶಿಸಿದೆ. ಹೆಚ್ಚಿನ ಪರಿಹಾರಕ್ಕಾಗಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News