ಚಿಕ್ಕಮಗಳೂರು: ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‍ಗೆ ಅದ್ಧೂರಿ ಚಾಲನೆ

Update: 2018-10-13 13:15 GMT

ಚಿಕ್ಕಮಗಳೂರು, ಅ.13: ಜಿಲ್ಲೆ ಕೆಮ್ಮಣ್ಣಗುಂಡಿ ಕಣಿವೆ ಪ್ರದೇಶದ ಸವಾಲಿನ ಹಾಗೂ ರುದ್ರರಮಣೀಯ ತಾಣದಲ್ಲಿರುವ ಲಾಲ್‍ಬಾಗ್ ಎಸ್ಟೇಟ್‍ನಲ್ಲಿ ಶನಿವಾರ ಮುಂಜಾನೆ ಆರಂಭವಾದ ಕಾಫಿಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‍ನ 50 ಕಿ.ಮೀ. ವಿಭಾಗದ ಮ್ಯಾರಥಾನ್‍ನಲ್ಲಿ ಅಮೆರಿಕದ ಹೇಡನ್ ಹಾಕ್ಸ್ ಪ್ರಶಸ್ತಿ ಗೆದ್ದರು.

ದೇಶದ 22 ರಾಜ್ಯಗಳು ಹಾಗೂ 13 ದೇಶಗಳ 811 ಮಂದಿ ಉತ್ಸಾಹಿ ಓಟಗಾರರು ಭಾಗವಹಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಅಮೆರಿಕದ ಧೀರ್ಘ ಅಂತರದ ಓಟಗಾರ ಹೇಡನ್ ಹಾಕ್ಸ್ 4 ಗಂಟೆ 19 ನಿಮಿಷದಲ್ಲಿ ದೂರ ಕ್ರಮಿಸಿ ಕೂಟದ ದಾಖಲೆ ಸ್ಥಾಪಿಸಿದರು.

ಭಾರತದ ರಾಜಶೇಖರ್ ರಾಜೇಂದ್ರ ಮತ್ತು ಸಂದೀಪ್ ಕುಮಾರ್ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಇವರು ಕ್ರಮವಾಗಿ 4 ಗಂಟೆ 38 ನಿಮಿಷ ಹಾಗೂ 4 ಗಂಟೆ 47 ನಿಮಿಷಗಳಲ್ಲಿ 50 ಕಿಲೋಮೀಟರ್ ದೂರ ಕ್ರಮಿಸಿ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್, ಪೋಲಂಡ್, ಫ್ರಾನ್ಸ್, ಅಮೆರಿಕ, ಮಾಲ್ಡೀವ್ಸ್, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಂ, ಸಿಂಗಾಪುರ, ಕೊಲಂಬಿಯಾ, ಜಪಾನ್ ಮತ್ತು ಮಲೇಷ್ಯಾದ 43 ಮಂದಿ ಅಂತಾರಾಷ್ಟ್ರೀಯ ಓಟಗಾರರು ಕೂಟದಲ್ಲಿ ಭಾಗವಹಿಸಿದ್ದರು. ಅಮೆರಿಕದಿಂದ ಗರಿಷ್ಠ ಎಂದರೆ ಏಳು ಮಂದಿ ಸ್ಪರ್ಧಿಗಳಿದ್ದರು. 143 ಮಹಿಳೆಯರು ಕೂಟದಲ್ಲಿ ಭಾಗವಹಿಸಿದ್ದು, 75 ವರ್ಷದ ಸ್ಪರ್ಧಿಗಳೂ ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

50 ಕಿಲೋಮೀಟರ್, 80 ಕಿಲೋಮೀಟರ್ ಮತ್ತು 110 ಕಿಲೋಮೀಟರ್ ವರ್ಗದಲ್ಲಿ ಸ್ಪರ್ಧೆಗಳು ನಡೆದವು. 50 ಕಿಲೋಮೀಟರ್ ಸ್ಪರ್ಧೆಯಲ್ಲಿ 111 ಮಂದಿ ಮಹಿಳೆಯರು ಸೇರಿದಂತೆ 496 ಮಂದಿ, 80 ಕಿಲೋಮೀಟರ್ ಸ್ಪರ್ಧೆಯಲ್ಲಿ 17 ಮಹಿಳೆಯರು ಸೇರಿದಂತೆ 96 ಮಂದಿ ಹಾಗೂ 110 ಕಿಲೋಮೀಟರ್ ನಲ್ಲಿ 15 ಮಹಿಳೆಯರು ಸೇರಿದಂತೆ 229 ಮಂದಿ ಸ್ಪರ್ಧಿಗಳಿದ್ದರು. 110 ಕಿಲೋಮೀಟರ್ ಸ್ಪರ್ಧೆ ನಾಳೆ ಮುಂಜಾನೆ ಕೊನೆಗೊಳ್ಳುವ ನಿರೀಕ್ಷೆ ಇದೆ.

ಮಲೆನಾಡು ಪ್ರದೇಶವು ಬಹಳಷ್ಟು ಕಾಫಿ ತೋಟಗಳನ್ನು ಹೊಂದಿದ್ದು, ಕಾಫಿ ಡೇ ಈ ಭಾಗದ ಕಾಫಿ ಸಾಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಈ ನಿಸರ್ಗ ಮನೋಹರ ಸೌಂದರ್ಯ ಸಿರಿಯನ್ನು ವಿಶ್ವದ ಎಲ್ಲ ಸುಧೀರ್ಘ ಓಟಗಾರರು ಸವಿಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕೂಟ ಆಯೋಜಿಸಲಾಗಿದೆ. ಸುಸ್ಥಿರ ಹಾಗೂ ಪರಿಸರಾತ್ಮಕವಾಗಿ ಸಮತೋಲಿತ ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News