ಆರೋಗ್ಯ ಸುಸ್ಥಿರವಾಗಿರಲು ಯೋಗ ಮಾಡಿ: ಸಚಿವ ಸಾ.ರಾ.ಮಹೇಶ್

Update: 2018-10-13 17:02 GMT

ಮೈಸೂರು,ಅ.13: ಆರೋಗ್ಯ ಕೆಟ್ಟ ಮೇಲೆ ಧೃತಿಗೆಡುವ ಬದಲು ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಒಳ್ಳೆಯದು. ಆರೋಗ್ಯ ಸುಸ್ಥಿರವಾಗಿರಲು ಎಲ್ಲರೂ ಯೋಗ ಮಾಡಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಯೋಗ ದಸರಾ ಉಪಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಮಂಜಿನ ನಡುವೆಯೇ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಸರಿಯಿಲ್ಲದಿದ್ದರೆ ಆತ ಏನನ್ನೂ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ದಿನಾಲೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಯೋಗದಿಂದ ಮನಸ್ಸು ಕೂಡ ಉಲ್ಲಸಿತವಾಗಿರಲಿದೆ ಎಂದರು. 

ಈ ಸಂದರ್ಭ ಸಾಯಿ ಸರಸ್ವತಿವಿದ್ಯಾ ಕೇಂದ್ರದ ನಾರಾಯಣ ಗುರೂಜಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ಸಂಸದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಚಾಮುಂಡಿ ಬೆಟ್ಟದ ಪಾದದ ಬಳಿ ಹಸಿರು ನಿಶಾನೆ ತೋರುವ ಮೂಲಕ ಚಾರಣಕ್ಕೆ ಚಾಲನೆ ನೀಡಲಾಯಿತು. ನೂರಾರು ಯೋಗಾಸಕ್ತರು ಸಹಸ್ರ ಮೆಟ್ಟಿಲೇರಿ ಬಂದು ಯೋಗಪ್ರದರ್ಶನ ನೀಡಿದರು.

ದುರ್ಗಾ ನಮಸ್ಕಾರದ ಬಳಿ ಜಿಲ್ಲಾಡಳಿತದ ವತಿಯಿಂದ ಪ್ರಸಾದ ವಿತರಣೆ, ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನದ ವ್ಯವಸ್ಥೆ ಮಾಡಿಸಲಾಗಿತ್ತು. ಮೈಸೂರಿನ ಯೋಗ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News