ಚಾಮರಾಜನಗರ ದಸರಾ ಮಹೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ

Update: 2018-10-13 17:14 GMT

ಚಾಮರಾಜನಗರ, ಅ. 13: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಜಿಲ್ಲೆಯಲ್ಲೂ ಆಯೋಜಿತವಾಗಿರುವ ಚಾಮರಾಜನಗರ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗ ನಿರ್ಮಿಸಿರುವ ವರ್ಣರಂಜಿತ ವೇದಿಕೆಯಲ್ಲಿಂದು ವಿದ್ಯುಕ್ತ ಚಾಲನೆ ದೊರೆಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರುಗಳು ದಸರಾ ಕಾರ್ಯಕ್ರಮಗಳಿಗೆ ವಿಶಿಷ್ಟ ರೀತಿಯಲ್ಲಿ ನಗಾರಿ ಬಾರಿಸಿ, ದೀಪ ಬೆಳಗಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು, ಚಾಮರಾಜನಗರ ದಸರಾ ಮಹೋತ್ಸವಕ್ಕೆ ಇಂದು ಅತ್ಯಂತ ಸಡಗರ, ಸಂಭ್ರಮದಿಂದ ಚಾಲನೆ ನೀಡಲಾಗಿದೆ. ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಚಾಮರಾಜನಗರ ದಸರಾ ಆಯೋಜಿಸಲು 1 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು. 2013ರಿಂದಲೂ ಚಾಮರಾಜನಗರ ದಸರಾ ಮಹೋತ್ಸವ ಆರಂಭವಾಗಿದೆ. ದಸರಾ ಕಾರ್ಯಕ್ರಮಗಳನ್ನು ಹಳೇ ಮೈಸೂರು ಭಾಗದ ಪ್ರತಿ ತಾಲೂಕು, ಹಳ್ಳಿಗಳಿಗೂ ವಿಸ್ತರಿಸುವ ಅಭಿಲಾಷೆಯನ್ನು ಸರ್ಕಾರ ಹೊಂದಿದೆ. ಇದರ ಪ್ರತಿಫಲವಾಗಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿಯೂ ದಸರಾ ಆಯೋಜನೆಯಾಗಿದೆ. ಪ್ರತಿವರ್ಷ ಇದು ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು, ಜನತೆಗೆ ದಸರಾ ಹಬ್ಬದ ಶುಭಾಷಯ ನುಡಿಯೊಂದಿಗೆ ಮಾತನಾಡಿ ಮೈಸೂರಿನಿಂದ ಪ್ರತ್ಯೇಕ ಜಿಲ್ಲೆಯಾಗಿ ಬೇರ್ಪಟ್ಟ ಚಾಮರಾಜನಗರ ಜಿಲ್ಲೆ ಇಂದು ಸಹ ಮೈಸೂರಿನ ಅವಿಭಾಜ್ಯ ಅಂಗವೇ ಆಗಿದೆ. ಹಳೇ ಮೈಸೂರು ಭಾಗದ ಪ್ರದೇಶಗಳ ಅಭಿವೃದ್ಧಿಗೆ ಅಡಿಪಾಯ ಹಾಕಿದವರು ಮೈಸೂರಿನ ಅರಸರು. ಅವರ ಕೊಡುಗೆ ಅಪಾರವಾದುದಾಗಿದೆ. ಅವರ ಕೊಡುಗೆಗಳನ್ನು ನಾವು ಸ್ಮರಿಸಿ ಅವರನ್ನು ಮಾದರಿಯಾಗಿ ಅನುಸರಿಸಬೇಕಾಗಿದೆ ಎಂದರು.

ಚಾಮರಾಜನಗರ ಚಾಮರಾಜ ಒಡೆಯರಿಗೆ ಜನ್ಮ ನೀಡಿದ ಪುಣ್ಯಸ್ಥಳವಿದು. ಮೈಸೂರು ಅರಸರು ಓಡಾಡಿದ ನಾಡಿದು. ಪ್ರತಿವರ್ಷ ಮೈಸೂರಿನಂತೆಯೆ ಇಲ್ಲಿಯೂ ಸಹ ದಸರಾ ಮಹೋತ್ಸವ ಜರುಗಬೇಕು. ನಮೆಲ್ಲರಲ್ಲೂ ಇಂದು ಹಬ್ಬದ ವಾತಾವರಣ ಮನೆ ಮಾಡಿದೆ. ಇಂತಹ ಸುಸಂದರ್ಭವನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರು ಕೃಷಿ, ಕೈಗಾರಿಕೆ, ನೀರಾವರಿ, ವಿದ್ಯುತ್ ಸೇರಿದಂತೆ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. ಸಂಸ್ಕೃತಿ ಕಲೆಗೆ ನೀಡಿದ ಕೊಡುಗೆಯ ಇಂದು ದಸರೆಯ ರೂಪದಲ್ಲಿ ನಾಡಿನೆಲ್ಲೆಡೆ ಮೇಳೈಸುತ್ತಿದೆ ಎಂದು ಮಹೇಶ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ ಹಾಗೂ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನಕುಮಾರ್ ಅವರು ಚಾಮರಾಜನಗರ ದಸರಾ ಕುರಿತು ಮಾತನಾಡಿ ಜನತೆಗೆ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಉಪಾಧ್ಯಕ್ಷ ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷ ದೊಡ್ಡಮ್ಮ, ಉಪಾಧ್ಯಕ್ಷ ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಂದಿದ್ವಜ, ನಾದಸ್ವರ, ವೀರಗಾಸೆ, ಹುಲಿವೇಷದಾರಿಗಳ ಕುಣಿತ, ಜನಪದ ನೃತ್ಯದ ತಂಡಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದ ಮೆರವಣಿಗೆಗೆ ಜಿಲ್ಲಾಡಳಿತ ಭವನದ ಅವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.

ಮೆರವಣಿಗೆಯು ಜಿಲ್ಲಾಡಳಿತ ಭವನದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಾಲಯದ ಅವರಣ ತಲುಪಿತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News