ಕವಿತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಆರೋಗ್ಯಪೂರ್ಣ ಮನಸ್ಥಿತಿ ಕಾಪಾಡಲು ಸಾಧ್ಯ: ಸಾಹಿತಿ ಶೂದ್ರ ಶ್ರೀನಿವಾಸ

Update: 2018-10-13 17:20 GMT

ಮೈಸೂರು,ಅ.13: ಯಾರು ಕಾವ್ಯದ ಬಗ್ಗೆ, ಕವಿತೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೋ, ಅವರೆಲ್ಲರೂ ಕೂಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆರೋಗ್ಯಪೂರ್ಣ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಸಾಹಿತಿ ಶೂದ್ರ ಶ್ರೀನಿವಾಸ ತಿಳಿಸಿದರು.

ದಸರಾ ಮಹೋತ್ಸವ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ರಸಋಷಿ ಕುವೆಂಪು ಅವರು ಪಾಠ ಮಾಡಿದ ಜಾಗಕ್ಕೆ ಬಂದಿರುವುದು ನನ್ನ ಬದುಕಿನ ಪುಣ್ಯ. ಕುವೆಂಪು ಅವರಿಂದ ಪಾಠ ಕೇಳಿದ ಡಾ.ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮಿನಾರಾಯಣ ಭಟ್ ಅವರ ಕಾವ್ಯದ ಅಮೋಘತೆಯಿಂದ ಆಕರ್ಷಿತನಾದವನು ನಾನು. ಕಾವ್ಯ ನಮ್ಮನ್ನು ಕಾಪಾಡಬೇಕು. ನಮ್ಮ ಮನಸ್ಥಿತಿಯನ್ನು ರಕ್ಷಿಸಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರೂ ಕೂಡ ಇಂದು ಕಾವ್ಯದ ಬಗ್ಗೆ ಗಾಢವಾದ ವ್ಯಾಮೋಹ ಬೆಳೆಸಿಕೊಂಡು ಕಾವ್ಯ ಬರೆಯತೊಡಗಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು. 

ಡಾ.ಜಿ.ಎಸ್.ಶಿವರುದ್ರಪ್ಪ, ಸಿದ್ದಲಿಂಗಯ್ಯ ಅವರು ಕುವೆಂಪು ಮಾಡಿದ ಪಾಠದ ಕುರಿತು ಗಾಢವಾದ ವ್ಯಾಮೋಹ ಬೆಳೆಸಿದ್ದರು. ಎರಡು ಸಾವಿರ ವರ್ಷಗಳ ಹಿಂದಿನ ರಾಮಾಯಣ, ಮಹಾಭಾರತ ಕಾವ್ಯಗಳು ಇಂದಿಗೂ ಆರೋಗ್ಯಪೂರ್ಣ ಜೀವನವನ್ನು ನಿರ್ಧರಿಸುತ್ತವೆ, ಕಾಪಾಡುತ್ತದೆ. ಭಾರತ ಮಾತ್ರವಲ್ಲ ಜಗತ್ತಿನ ಬೇರೆ, ಬೇರೆ ಭಾಷೆಗಳಲ್ಲಿಯೂ ರಾಮಾಯಣ, ಮಹಾಭಾರತ ಕುರಿತು ಕೃತಿ ಹುಟ್ಟಿಕೊಳ್ಳುತ್ತಿವೆ ಎಂದರು.

ಕರ್ನಾಟಕದ ಉದ್ದಗಲಕ್ಕೂ ದಲಿತರು ಆರೋಗ್ಯಪೂರ್ಣ ಕವಿತೆ ಬರೆಯಬೇಕು ಎಂಬ ಉದ್ದೇಶದಿಂದ ಹಲವಾರು ಕವಿತೆಗಳನ್ನು ಶೂದ್ರದಲ್ಲಿ ಪ್ರಕಟಿಸಿದೆ. ಲೋಹಿಯಾ ಹೇಳುವಂತೆ ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಯಾವುದೂ ಬೇರೆಯಲ್ಲ. ಅವುಗಳನ್ನು ಸಮಾಜದ ಮುಖ್ಯ ಅಂಗವಾಗಿ ಸ್ವೀಕರಿಸಬೇಕು. ಗಾಂಧೀಜಿ, ಲೋಹಿಯಾ, ನೆಹರೂ ಅವರಿಗೆ ಅರಿವಿನ ಬಗ್ಗೆ ಅಗಾಧ ಪ್ರೀತಿಯಿತ್ತು. ಇಲ್ಲದಿದ್ದರೆ ಜಗತ್ತನ್ನು ಅರಿತುಕೊಳ್ಳಲು ಸಾಧ್ಯವಿರಲಿಲ್ಲ ಎಂದು ತಿಳಿಸಿದರು.

ಮನಸ್ಸಿನಲ್ಲಿ ಕಾವ್ಯದ ಸಾಲುಗಳು ಹುಟ್ಟಿಕೊಳ್ಳಬೇಕು. ಕವಿತೆಯ ಸಾಲುಗಳು ಪಕ್ವವಾಗುತ್ತಾ ಹೋಗಬೇಕು. ಗದ್ದಲಕ್ಕೆ ಒಳಗಾಗಬಾರದು. ಸಂತರ ರೀತಿಯಲ್ಲಿ ವಾಕ್ಯಗಳು ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಖ್ಯಾತ ಕವಯಿತ್ರಿ ಕೆ.ಷರೀಫಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News