ಮೈಸೂರು: ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಚಾಲನೆ; ಕುಣಿದು ಕುಪ್ಪಳಿಸಿದ ಯುವಸಮೂಹ

Update: 2018-10-13 17:24 GMT

ಮೈಸೂರು,ಅ.13: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ನಗರಿಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನ್ನು ಕೋರ್ಟ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಳೆದ ವರ್ಷ ಅರಸು ರಸ್ತೆಯಲ್ಲಿ ನಡೆದಿದ್ದ ಓಪನ್ ಸ್ಟ್ರೀಟ್ ಮೇಳಕ್ಕೆ ಟ್ರಾಫಿಕ್ ಸಮಸ್ಯೆ ಆಗಿದ್ದ ಕಾರಣ ಅರಸು ರಸ್ತೆಯಿಂದ ಬುಲ್ ವಾರ್ಡ್ ರಸ್ತೆಯಲ್ಲಿ ಆಯೋಜನೆಗೊಂಡಿತ್ತು. ಏಕಲವ್ಯ ವೃತ್ತದಿಂದ ಕೋರ್ಟ್ ಸಮೀಪದ ವೃತ್ತದವರೆಗೆ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ವಿದೇಶದಲ್ಲಿ ನಡೆಯುವ ಮಾದರಿಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಡಿಜೆ ಡ್ಯಾನ್ಸ್ ಸೇರಿದಂತೆ ಇನ್ನಿತರ ಮನರಂಜನಾ ಕಾರ್ಯಕ್ರಮಗಳ ಧಮಾಕ, ವೈವಿಧ್ಯಮಯ ಕಾರ್ಯಕ್ರಮಗಳು ಜನತೆಯನ್ನು ಆಕರ್ಷಿಸಿದವು. ದಸರಾ ಪ್ರಯುಕ್ತ ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮಗಳಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಯುವಕರ ಫೇವರೆಟ್ ಕಾರ್ಯಕ್ರಮವಾಗಿದೆ.

ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಯುವಕ ಯುವತಿಯರು ಅಲ್ಲಲ್ಲಿ ಜನಪ್ರಿಯ ಹಾಡುಗಳಿಗೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು. ಬೈಸಿಕಲ್‍ನಲ್ಲಿ ಯುವಕನೊಬ್ಬ ಸಾಹಸ ಮಾಡುತ್ತಿದ್ದ ದೃಶ್ಯ ರೋಮಾಂಚನಗೊಳಿಸುವಂತಿತ್ತು. ಹುಲಿ, ಕರಡಿ ವೇಷಧಾರಿಗಳು ರಸ್ತೆಯ ಮಧ್ಯೆ ಕುಣಿದು ನಿಂತಲ್ಲಿಯೇ ಪಲ್ಟಿಒಡೆದು ಎಲ್ಲರ ಗಮನವನ್ನು ಸೆಳೆದರು.

ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ಓಪನ್ ಸ್ಟ್ರೀಟ್ ಫೆಸ್ಟಿವಲ್ ಉದ್ಘಾಟನೆಗೆಂದು ಬಂದು ಕಾದು ಕುಳಿತಿದ್ದ ಬಿಜೆಪಿ ನಾಯಕರು ಸಚಿವರು ಆಗಮಿಸದ ಕಾರಣ ವಾಪಸ್ ಆದ ಘಟನೆಯೂ ನಡೆಯಿತು. ಶಾಸಕರಾದ ಎಸ್.ಎ.ರಾಮ್ ದಾಸ್, ನಾಗೇಂದ್ರ ವಾಪಸ್ಸಾದರು. 10 ಗಂಟೆಗೆ ಉದ್ಘಾಟನೆ ಆಗಬೇಕಿದ್ದ ಕಾರ್ಯಕ್ರಮ 11 ಗಂಟೆಯಾದರೂ ಉದ್ಘಾಟನೆಯಾಗಲಿಲ್ಲ. ಒಂದು ಗಂಟೆಗೂ ಹೆಚ್ಚುಕಾಲ ಕಾದು ಕುಳಿತ ಶಾಸಕರು ಸಚಿವರು ಬರದ ಕಾರಣ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ಬಳಿಕ 11.30ಕ್ಕೆ ಆಗಮಿಸಿದ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News