ನಾಗಮಂಗಲ: ಎರಡು ಗುಂಪುಗಳ ನಡುವೆ ಬಡಿದಾಟ; ಆಸ್ಪತ್ರೆಗೆ ದಾಖಲು

Update: 2018-10-13 18:09 GMT

ನಾಗಮಂಗಲ, ಅ.13: ಅಕ್ರಮ ಕಲ್ಲುಗಣಿಗಾರಿಕೆ ವಿಚಾರವಾಗಿ ಎರಡು ಕೋಮುಗಳು ಪರಸ್ಪರ ಬಿಡಿದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಬೆಳ್ಳೂರು ಕ್ರಾಸ್‍ನಲ್ಲಿ ಶನಿವಾರ ನಡೆದಿದ್ದು, ದೊಡ್ಡೇಗೌಡನಹಳ್ಳಿ ಗ್ರಾಮಕ್ಕೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ದೊಡ್ಡೇಗೌಡನಹಳ್ಳಿ ಗ್ರಾಮದ ಸವರ್ಣಿಯರು ಹಾಗೂ ಬೋವಿ ಜನಾಂಗದವರು ಪಕ್ಕದ ಗ್ರಾಮ ಕನ್ನೇನಹಳ್ಳಿ ಬಳಿ ಅಕ್ರಮ ಗಣಿಗಾರಿಕೆ ನಡೆಸುವ ವಿಚಾರದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.  

ಬೆಳ್ಳೂರು ಕ್ರಾಸ್ ಬಳಿ ನಿಂತಿದ್ದ ಸದರಿ ಗ್ರಾಮದ ಬೋವಿ ಜನಾಂಗದ ಪಾಪ ಬೋವಿ ಮತ್ತು ಆತನ ಬೆಂಬಲಿಗರ ಮೇಲೆ ಸವರ್ಣಿಯ ಸಮುದಾಯದ ಪುಟ್ಟಸ್ವಾಮಿ ಮತ್ತು ಸಂಗಡಿಗರು ಏಕಾಏಕಿ ಹಲ್ಲೆ ಮಾಡಿ, ಅಕ್ರಮ ಗಣಿಗಾರಿಕೆ ವಿಚಾರವಾಗಿ ಬೆದರಿಕೆ ಹಾಕಿದರಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು  ಆರೋಪಿಸಲಾಗಿದೆ. 

ಘಟನೆಯಲ್ಲಿ 6 ಜನ ಬೋವಿ ಜನಾಂಗದವರು ಗಾಯಗೊಂಡು ಬೆಳ್ಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿಯಾಗಿ ಹಲವರು ಸವರ್ಣಿಯರೂ ಕೂಡ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಅಕ್ರಮ ಕಲ್ಲುಗಣಿಗಾರಿಕೆ ವಿಚಾರವಾಗಿ ತಿಂಗಳಿಂದಲೂ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಒಂದು ಗುಂಪು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಬೆಳ್ಳೂರು ಠಾಣೆ ಮುಂದೆ ದರಣಿ ನಡೆಸಿತ್ತು. ನಂತರ ತಹಶೀಲ್ದಾರ್ ನಂಜುಂಡಯ್ಯ ಎರಡು ಗುಂಪುಗಳ ಶಾಂತಿಸಭೆ ನಡೆಸಿದ್ದರು ಮತ್ತು ಅಕ್ರಮ ಗಣಿಗಾರಿಕೆಯ ಕನ್ನೇನಹಳ್ಳಿ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ 145 ಸೆಕ್ಷನ್ ಜಾರಿಗೊಳಿಸಿದ್ದರು.

ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‍ಪಿ ಧರ್ಮೇಂದ್ರ, ಸಿಪಿಐ ನಂಜಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಪ್ರಕಾಶ್‍ಬಾಬು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮುನ್ನೆಚ್ಚರಿಕೆಯಾಗಿ ದೊಡ್ಡೇಗೌಡನಹಳ್ಳಿ ಗ್ರಾಮದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಘಟನೆಗೆ ಸಂಬಂದಿಸಿದಂತೆ ಎಸ್ಸಿ,ಎಸ್ಟಿ ದೌರ್ಜನ್ಯ  ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದವರ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಬೆಳ್ಳೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News