ಡಿ.ಕೆ.ಶಿವಕುಮಾರ್ ಆಟ ರಾಮನಗರಕ್ಕೆ ಸೀಮಿತ: ಮಾಜಿ ಸಚಿವ ಜನಾರ್ದನ ರೆಡ್ಡಿ

Update: 2018-10-14 12:08 GMT

ಬಾಗಲಕೋಟೆ, ಅ. 14: ಡಿ.ಕೆ.ಶಿವಕುಮಾರ್ ಅವರ ಪ್ರಭಾವವೇನಿದ್ದರೂ ಅದು ಕನಕಪುರ, ರಾಮನಗರಕ್ಕೆ ಸೀಮಿತ. ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಅವರ ಆಟವೇನೂ ನಡೆಯುವುದಿಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಗುಡುಗಿದ್ದಾರೆ.

ರವಿವಾರ ಇಲ್ಲಿನ ಮುಧೋಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್ ಆಟ ಏನೂ ನಡೆಯುವುದಿಲ್ಲ. ನಮ್ಮ ಜನರು ಸ್ವಾಭಿಮಾನಿಗಳು, ಯಾರೋ ಎಲ್ಲಿಂದಲೋ ಬಂದು ಏನೇ ಸವಾಲು ಹಾಕಿದರೂ ಜನತೆ ಸೂಕ್ತ ಉತ್ತರ ನೀಡಲಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆನ್ನುವುದು ಕರ್ನಾಟಕ ಜನರ ಅಪೇಕ್ಷೆ ಇದೆ. ಬಳ್ಳಾರಿಯಲ್ಲಿ ನಾವು ನಮ್ಮ ಪ್ರಭಾವವನ್ನು ಕಳೆದುಕೊಂಡಿಲ್ಲ. ಜನ ನಮಗೆ ಆಶಿರ್ವಾದ ಮಾಡುತ್ತಾ ಬಂದಿದ್ದಾರೆ. ಶ್ರೀರಾಮಲು ಗೆದ್ದಿದ್ದಾರೆ, ರೆಡ್ಡಿ ಸಹೋದರರು ಇಬ್ಬರೂ ಗೆದ್ದಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಶಾಸಕ ಶ್ರೀರಾಮಲು ಅವರು ಬಳ್ಳಾರಿ ಮಣ್ಣಿನ ಮಗ, ನೇರವಾಗಿ ಮಾತನಾಡುವ ಮನುಷ್ಯ. ಅವರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಆದರೆ ಬಳ್ಳಾರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಾಂತಾ ಅವರಿಗೆ ಈ ಬಾರಿ ಬಳ್ಳಾರಿ ಜನತೆ ಮತಗಳನ್ನ ಕೊಟ್ಟು, ಆಯ್ಕೆ ಮಾಡುವಲ್ಲಿ ಸಂಶಯವಿಲ್ಲ ಎಂದು ರೆಡ್ಡಿ ಭವಿಷ್ಯ ನುಡಿದರು.

ಸಣ್ಣ-ಪುಟ್ಟ ಇರುವೆಗಳು ಮಾತನಾಡುತ್ತವೆಂದು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶ್ರೀರಾಮುಲು ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆಗೆ ತೀರುಗೇಟು ನೀಡಿದ ಅವರು, ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News