×
Ad

ಮೋದಿ ಆಡಳಿತದಿಂದಾಗಿ ದೇಶದಲ್ಲಿ ಜಂಗಲ್‍ರಾಜ್ ವ್ಯವಸ್ಥೆ: ಈಶ್ವರ್ ಖಂಡ್ರೆ ಟೀಕೆ

Update: 2018-10-14 18:43 IST

ಚಿಕ್ಕಮಗಳೂರು, ಅ.14: ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದಾಗಿ ದೇಶಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಮೋದಿ ಆಡಳಿತದ ಪರಿಣಾಮ ದೇಶದಲ್ಲಿ ಜಂಗಲ್‍ರಾಜ್ ವ್ಯವಸ್ಥೆ ನಿರ್ಮಾಣವಾಗಿದೆ. ಇಂತಹ ಭಯಾನಕ ವಾತಾವರಣ ದೇಶದಲ್ಲಿ ಹಿಂದೆಂದೂ ಸೃಷ್ಟಿಯಾಗಿರಲಿಲ್ಲ ಎಂದು ಶಾಸಕ ಹಾಗೂ ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಸಕ್ತ ಎಲ್ಲೆಡೆ ಆತಂಕ, ಭಯದ ವಾತಾವರಣ ಸೃಷ್ಟಿಯಾಗಿದೆ. ಶೋಷಿತರು, ಅಲ್ಪಸಂಖ್ಯಾತರು, ಮಹಿಳೆಯರು, ಬಡವರ ಮೇಲೆ ಮೇಲ್ವರ್ಗದವರಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇಂತಹ ಶೋಷಿತರ ವಿರೋದಿ, ಬಡ, ರೈತ ವಿರೋದಿ ಬಿಜೆಪಿ ಸರಕಾರವನ್ನು ಬುಡಸಮೇತ ಹಾಕಬೇಕಿದೆ. ಸುಭದ್ರ, ಸ್ವಚ್ಛ ಆಡಳಿತಕ್ಕಾಗಿ ರಾಹುಲ್ ಗಾಂಧಿ ದೇಶದ ಪ್ರಧಾನ ಮಂತ್ರಿ ಆಗಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಜನ ಸಂಪರ್ಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದಲ್ಲಿ ಪ್ರತೀ ಮನೆಮನೆಗೆ ಹೋಗಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನತೆ ಮುಂದಿಡಲಾಗುವುದು ಎಂದು ಹೇಳಿದರು.

ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ. ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಬೇಕಿದೆ. ಪಕ್ಷ ಬಲವರ್ದನೆಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಹಾತ್ಮಗಾಂಧಿ  ಜಯಂತಿಯಿಂದ ಆರಂಭವಾಗಿರುವ ಜನ ಸಂಪರ್ಕ ಆಂದೋಲನ ಇಂದಿರಾಗಾಂಧಿ ಹುಟ್ಟುಹಬ್ಬದವರೆಗೆ ನಡೆಯಲಿದೆ. ಬಿಜೆಪಿ ಪಕ್ಷ ಕಾಂಗ್ರೆಸ್ ವಿರುದ್ಧ ಮಾಡಿರುವ ಸುಳ್ಳು ಅಪ್ರಚಾರಗಳನ್ನು ಈ ಸಂದರ್ಭ ತಿಳಿಸುತ್ತೇವೆ. 21ನೇ ಶತಮಾನದಲ್ಲಿ ಭಾರತ ದೇಶ ತಲೆ ಎತ್ತಿ ಮೆರೆಯುವಂತಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ವಿನ: ಬಿಜೆಪಿಯಲ್ಲ ಎಂದರು.

ನಮ್ಮ ಪಕ್ಷ ಸಮಾನತೆ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮಾಜ ಕಟ್ಟುವ ಉದ್ದೇಶ ಹೊಂದಿದೆ. ತ್ಯಾಗ ಬಲಿದಾನದ ಮೇಲೆ ನಿಂತಿರುವ ಪಕ್ಷ ನಮ್ಮದು. ನಾಲ್ಕೂವರೆ ವರ್ಷದ ಹಿಂದೆ ಬಂದ ಮೋದಿ ಸರಕಾರ ನೀಡಿದ್ದ ಭರವಸೆಗಳನ್ನು ಮರೆತು ಜನತೆಗೆ ಮೋಸ ಮಾಡಿದೆ. 'ಅಚ್ಚೇದಿನ್' ನಮ್ಮ ಜನತೆಗೆ ಬರಲೇ ಇಲ್ಲ. ಕಪ್ಪು ಹಣ ಯಾವೊಬ್ಬರ ಖಾತೆಗೂ ನಯಾ ಪೈಸೆ ಬರಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಮೋಸ ಮಾಡಿದರು. ಫಸಲ್ ಬಿಮಾ ಯೋಜನೆ ರೈತರ ತುಟಿಗೆ ತುಪ್ಪ ಹಚ್ಚುವಂತದ್ದು. ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಆಗುವಂತಹ ನೀತಿ ನಿಯಮ ರೂಪಿಸಿ ಅವರಿಗೆ ಅನುಕೂಲ ಮಾಡಿಕೊಡುವ ಮೂಲಕ ರೈತರ ಹೆಸರ ಮೇಲೆ ಕೇಂದ್ರ ಸರಕಾರ ಹಗಲು ದರೋಡೆ ಮಾಡಿದೆ ಎಂದು ಆರೋಪಿಸಿದರು.

ಫಸಲ್ ಬಿಮಾ ಯೋಜನೆಯಲ್ಲಿ ಪ್ರತಿ ವರ್ಷ 10 ರಿಂದ 15 ಸಾವಿರ ರೂ.ಕೋಟಿ ಖಾಸಗಿ ಕಂಪನಿಗೆ ಹೋಗುತ್ತಿದೆ. ಇದು ರೈತರಿಗೆ ಮೋದಿ ನೀಡಿದ ಕೊಡುಗೆ. ರೈತರ ಸಾಲ ಮನ್ನಾ ಮಾಡಲಿಲ್ಲ, ಕೃಷಿ ಉತ್ಪನ್ನಗಳ ಬೆಲೆ ಪಾತಾಳ ಕಂಡಿದೆ. ನೋಟ್ ಬ್ಯಾನ್ ಮಾಡಿ ಸಣ್ಣಪುಟ್ಟ ವ್ಯಾಪಾರಿಗಳು ಆರ್ಥಿಕ ಕುಸಿತ ಕಂಡರು.  2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಭರವಸೆ ಹುಸಿಯಾಗಿದೆ. ಇದರಿಂದ ನಿರುದ್ಯೋಗ ಹೆಚ್ಚಾಗಿ ಯುವ ಜನತೆ ಭ್ರಮನಿರಶನಗೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್, ಜಿಲ್ಲಾ ಉಸ್ತುವಾರಿ ಗೋಪಾಲಭಂಡಾರಿ, ಮಾಜಿ ಎಂಎಲ್ಸಿ ಗಾಯತ್ರಿಶಾಂತೇಗೌಡ, ಕಾಂಗ್ರೆಸ್ ಮುಖಂಡರಾದ ಎಸ್.ಎಂ.ನಾಗರಾಜ್, ಶಿವಶಂಕರಪ್ಪ, ಸಚಿನ್‍ಮಿಗಾ,ಶಿವಾನಂದಸ್ವಾಮಿ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ರಕ್ಷಣಾ ವಲಯದಲ್ಲೇ ದೊಡ್ಡ ಹಗರಣವಾಗಿದೆ. ಇದನ್ನು ಮುಚ್ಚಿಹಾಕುವ ಕೆಲಸ ಈಗ ಮಾಡುತ್ತಿದ್ದಾರೆ. ಯುಪಿಎ ಸರಕಾರವಿದ್ದಾಗ 526 ಕೋಟಿ ರೂ.ಗೆ ಒಂದು ವಿಮಾನ ಖರೀದಿಗೆಂದು ಒಪ್ಪಂದವಾಗಿತ್ತು. ಆದರೆ, ಮೂರೇ ವರ್ಷದಲ್ಲಿ 1,670 ಕೋಟಿ ಅಂದರೆ 3 ಪಟ್ಟು ಹೆಚ್ಚು ಮಾಡುವ ಮೂಲಕ ಭ್ರಷ್ಟಾಚಾರ ನಡೆದಿದೆ ಹಾಗೂ ಕೆಲ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಎಚ್‍ಎಎಲ್ ಬದಲಿಗೆ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡುವ ಮೂಲಕ ರಕ್ಷಣಾ ವಲಯದ ಗೌಪ್ಯತೆಯನ್ನೇ ಬಯಲು ಮಾಡಲಾಗಿದೆ.
- ಈಶ್ವರ್ ಖಂಡ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News