ಬಿಜೆಪಿ ಮುಖಂಡರು ಹಗಲುಗನಸು ಕಾಣುವುದನ್ನು ನಿಲ್ಲಿಸಲಿ : ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಅ. 14: ರಾಜ್ಯ ಬಿಜೆಪಿ ಮುಖಂಡರು, ಅಧಿಕಾರಕ್ಕಾಗಿ ಹಗಲು-ಗನಸು ಕಾಣುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ರವಿವಾರ ಜಯನಗರದ ಪೂರ್ಣಿಮಾ ಕನ್ವೆಂನ್ಷನ್ ಹಾಲ್‌ನಲ್ಲಿ ಜಯನಗರದ ನಾಗರಿಕ ವೇದಿಕೆ ಹಮ್ಮಿಕೊಂಡಿದ್ದ, ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್‌ಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉಪ ಚುನಾವಣೆ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗುತ್ತೇ ಎಂದು ಭವಿಷ್ಯ ಹೇಳುತ್ತಿದ್ದಾರೆ. ಆದರೆ, ಐದು ವರ್ಷಗಳ ಕಾಲ ಮೈತ್ರಿ ಸರಕಾರ ಸುಭದ್ರವಾಗಿರಲಿದ್ದು, ಬಿಜೆಪಿ ಮುಖಂಡರು ಹಗಲುಗನಸು ಕಾಣುವುದನ್ನು ಬಿಡಲಿ ಎಂದು ಸಲಹೆ ಮಾಡಿದರು.
ರೈತರ ಸಾಲವನ್ನು ಮನ್ನಾ ಮಾಡಿ ರಾಜ್ಯದ ಅನ್ನದಾತರ ಹಿತ ಕಾಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತಮವಾದ ಆಡಳಿತ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ವ್ಯರ್ಥ ಆರೋಪದಲ್ಲಿ ನಿರತರಾಗಿದ್ದಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿ ಎಂದರು.
ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯ ಮಂತ್ರಿಯಾಗಿರಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದ ಅಭಿವೃದ್ಧಿಗಾಗಿ ಸಮ್ಮಿಶ್ರ ಸರಕಾರ ಶ್ರಮಿಸಲಿದ್ದು, ಸುಸ್ಥಿರ ಸರಕಾರದ ಗುರಿ ಕಾಂಗ್ರೆಸ್ ಪಕ್ಷದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿದೆ ಎಂದು ತಿಳಿಸಿದರು.
ಉನ್ನತ ಹುದ್ದೆಯನ್ನು ನೀಡಲಿದೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸಾಮಾಜಿಕ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸಣ್ಣ ಸಮುದಾಯದವರನ್ನೂ ಗುರುತಿಸಿ ಉನ್ನತ ಹುದ್ದೆಯನ್ನು ಕಾಂಗ್ರೆಸ್ ಪಕ್ಷ ನೀಡಿದ್ದು, ಸವಿತಾ ಸಮುದಾಯದ ಮುಖಂಡ ಎಂ.ಸಿ.ವೇಣುಗೋಪಾಲ್ ಅವರೇ ಸಾಕ್ಷಿ ಎಂದರು.
ಪಕ್ಷದ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಬೆಂಗಳೂರು ಪಕ್ಷ ಸಂಘಟನೆ ಮಾಡಿದ್ದಾರೆ. ಹೀಗಾಗಿ ವೇಣುಗೋಪಾಲ್ ಅವರಿಗೆ ಮೇಲ್ಮನೆ ಸದಸ್ಯ ಹುದ್ದೆ ಒಲಿದು ಬಂದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸಂಘಟಿಸಲಿ ಎಂದು ಹೇಳಿದರು.
ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ಜಯನಗರ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಕಾರಣರಾಗಿದ್ದಾರೆ. ತಮಗಾಗಿ ವೇಣುಗೋಪಾಲ್ ಅವರು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹಾಜರಿದ್ದರು.