ಮಂಡ್ಯದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸುತ್ತೇವೆ : ಪ್ರತಾಪ್‍ಸಿಂಹ

Update: 2018-10-14 15:13 GMT

ಮಂಡ್ಯ, ಅ.14: ಹಾಸನದಲ್ಲಿ ಕುಳಿತು ಮಂಡ್ಯದ ರಾಜಕಾರಣ ಮಾಡುವವರಿಂದ ಜಿಲ್ಲೆಯು ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಮೈಸೂರು ಕೊಡಗು ಸಂಸದ ಹಾಗೂ ಬಿಜೆಪಿ ಜಿಲ್ಲಾ ಚುನಾವಣಾ ಉಸ್ತವಾರಿ ಪ್ರತಾಪ್‍ಸಿಂಹ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಉಪಚುನಾವಣೆ ಸಂಬಂಧ ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ನಡೆದ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡ ಕುಟುಂಬದಿಂದ ಜಿಲ್ಲೆ ಅಭಿವೃದ್ಧಿಯಾಗಿಲ್ಲವೆಂದು ಆರೋಪಿಸಿದರು.

1995ರಲ್ಲಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಮೈಸೂರು ಮಾರ್ಗವನ್ನು ನೈಸ್ ರಸ್ತೆ ಮಾಡುವುದಾಗಿ ಸಹಿ ಹಾಕಿದ್ದರೂ, ರಸ್ತೆ ಮಾಡಲಾಗಲಿಲ್ಲ ಎಂದು ಅವರು ಟೀಕಿಸಿದರು.

ಪ್ರತಿದಿನ 35 ಸಾವಿರ ವಾಹನ ಸಂಚಾರ ಮಾಡುವ ರಸ್ತೆಯಲ್ಲಿ ಸಾವಿರಾರು ಸಾವು–ನೋವು ತಪ್ಪಿಸಲು ಬಿಜೆಪಿ ಸರಕಾರ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿ ದಶಪಥ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಈಗಾಗಲೇ 3 ಸಾವಿರ ಕೋಟಿ ಹಣದಲ್ಲಿ ಭೂಸ್ವಾಧೀನ ಮಾಡಲಾಗಿದ್ದು, 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಇದಲ್ಲದೆ ಜಿಲ್ಲಾ ಕೇಂದ್ರದಲ್ಲಿ ಪಾಸ್‍ಪೋರ್ಟ್ ಕೇಂದ್ರ ತೆರೆಯಲಾಗುವುದು ಎಂದು ಅವರು ಹೇಳಿದರು.

ಡಾ.ಲಕ್ಷ್ಮಿ ಅಶ್ವಿನ್‍ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಪ್ರಸ್ತಾಪಿಸಿದ ಪ್ರತಾಪ್‍ಸಿಂಹ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ನಂಬಿ ಮತ ಹಾಕಿದ ಜನರಿಗೇ ನ್ಯಾಯ ಒದಗಿಸಿಕೊಡದವರು ಸ್ಥಾನಮಾನ ನಂಬಿ ಬಂದವರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲೆಯ ಸ್ಥಳೀಯ ನಾಯಕ ಡಾ.ಸಿದ್ದರಾಮೇಗೌಡ ವಿದ್ಯಾರ್ಥಿ ದೆಸೆಯಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನಲ್ಲಿ ಕೆಲಸ ಮಾಡಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿ ಸೇವೆ ಮಾಡಿ ಜನತೆಗೆ ಪರಿಚಿತರಾಗಿದ್ದಾರೆ. ಹೀಗಾಗಿ ಸಿದ್ದರಾಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಜಿಲ್ಲೆಯಲ್ಲಿ  ಪಕ್ಷದ ಗೆಲುವಿನ ಬಾವುಟ ಹಾರಿಸುತ್ತೇವೆ ಎಂದು ಅವರು ಹೇಳಿಕೊಂಡರು.

ಬಿಜೆಪಿ ಮುಖಂಡ ಶಿವಲಿಂಗೇಗೌಡ ಮಾತನಾಡಿ, ನಾಟಕ ಮಾಡುವವರು ಹಾಗೂ ಬಣ್ಣ ಹಚ್ಚುವವರು ಜೆಡಿಎಸ್ ಅಭ್ಯರ್ಥಿಗಳಾಗುತ್ತಾರೆ. ಬಾಯಿಬಿಟ್ಟರೆ ಸುಳ್ಳು ಮಾತನಾಡುವ ಸುಳ್ಳುಗಾರನಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡಿರುವುದು ಖುಷಿಯಾಗಿದ್ದು, ಬಿಜೆಪಿ ಗೆಲುವಿಗೆ ನೆರವಾಗಲಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News