ಮೈಸೂರು ದಸರಾ : ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-10-14 15:58 GMT

ಮೈಸೂರು,ಅ.14: ವಿಶ್ವವಿಖ್ಯಾತ  ಮೈಸೂರು ದಸರಾದಲ್ಲಿ ಇದೇ ಪ್ರಥಮ ಬಾರಿಗೆ ನಡೆದ ಸಾಂಸ್ಕೃತಿಕ ಮೆರವಣಿಗೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 
ದಸರಾ ಮಹೋತ್ಸವದ ಕಡೆಯ ದಿನ ನಡೆಯುವ ಜಂಬೂ ಸವಾರಿ ವೀಕ್ಷಿಸಲು ವಿಶ್ವದಾದ್ಯಂತ ಜನರು ಆಗಮಿಸುತ್ತಾರೆ.

ಸಾಂಸ್ಕೃತಿಕ ಮೆರವಣಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರೆ,  ಅ.19 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಲಿದ್ದಾರೆ.

ಇಂದು ನಡೆದ ಸಾಂಸ್ಕೃತಿಕ ಮೆರವಣಿಗೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ರವಿವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಚಾಲನೆ ನೀಡಿದರು. 

ದಸರಾ ಮಾದರಿಯಲ್ಲೇ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತಾದರೂ ಅರಮನೆ ಆವರಣದಲ್ಲಿ ಪ್ರಾವಾಸಿಗರು ಬಿಟ್ಟರೆ ಸ್ಥಳೀಯ ಜನರೇ ಇರಲಿಲ್ಲ. ಇನ್ನೂ ಅರಮನೆಯಿಂದ ಬನ್ನಿಮಂಟಪದ ವರೆಗೆ ನಡೆದ  ಮೆರವಣಿಗೆಯನ್ನು ನೋಡಲು ಅಷ್ಟಾಗಿ ಜನ ಉತ್ಸುಕತೆ ತೋರಲಿಲ್ಲ. 

ಈ ಮೆರವಣಿಗೆಯಲ್ಲಿ ಒಟ್ಟು 40 ಕಲಾ ತಂಡಗಳು ಭಾಗವಹಿಸಿದ್ದು, 400 ಕಲಾವಿದರು ಹಾಗೂ 11500 ಜನ ಪಾರಂಪರಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವ ಸಂಭ್ರಮದಲ್ಲಿ ಭಾಗವಹಿಸಿದ್ದ 25 ಕಲಾ ತಂಡಗಳ ಜೊತೆ ಇವರು ಹೆಜ್ಜೆ ಹಾಕಿದರು. ಈ ಸಾಂಸ್ಕೃತಿಕ ಮೆರವಣಿಗೆಯಲ್ಲಿ 10 ದಸರಾ ಆನೆಗಳು ಅಶ್ವಪಡೆ ಹಾಗು ಪೊಲೀಸ್ ಪಡೆಗಳು ಭಾಗಹಿಸಿದ್ದವು.

ಉನ್ನತ ಶಿಕ್ಷಣ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಜಿ.ಪಂ. ಸಿಇಓ ಕೆ.ಜ್ಯೋತಿ, ಪೊಲೀಸ್ ಅಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿಸಿಪಿಗಳಾದ ವಿಷ್ಣುವರ್ಧನ್, ವಿಕ್ರಂ ಆಮ್ಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದು ನಾಡಹಬ್ಬ ಇದನ್ನು ಎಲ್ಲರೂ ಸೇರಿ ಆಚರಿಸಬೇಕು, ಇದರಲ್ಲಿ ತಾರತಮ್ಯ ಎಂಬುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಅರಮನೆ ಕೋಟಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ರವಿವಾರ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಶ್ವವಿಖ್ಯಾತ ನಾಡ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವನ್ನುಂಟು ಮಾಡಿದೆ. ನಾಡಿನ ಜನ ಸುಭಿಕ್ಷೆಯಿಂದಿರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಜಿಲ್ಲೆಯ ಕಾಂಗ್ರೆಸ್‍ನ ಯಾವೊಬ್ಬ ಶಾಸಕರು ಪಾಲ್ಗೊಳ್ಳದಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರು ಕಾಂಗ್ರೆಸ್ಸಿಗನಲ್ಲವೇ. ಕೆಲವು ಕೆಲಸ ಒತ್ತಡದಿಂದ ಕೆಲವರು ಭಾಗವಹಿಸಿಲ್ಲ, ನಮ್ಮ ಸರ್ಕಾರದ ಅನೇಕ ಸಚಿವರುಗಳು ಬಂದು ಹೋಗಿದ್ದಾರೆ, ಎಲ್ಲರೂ ಇನ್ನು ಮುಂದೆ ಭಾಗವಹಿಸುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News