ಮೈಸೂರು ದಸರಾ ಮಹೋತ್ಸವ : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

Update: 2018-10-14 15:56 GMT

ಮೈಸೂರು,ಅ.14: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ರವಿವಾರ ನಡೆದ ಏರ್ ಶೋ ನೋಡುಗರ ಮೈನವಿರೇಳಿಸಿತು. ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆದ ಏರ್ ಶೋಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಂಡು ಜನ ಪುಳಕಿತಗೊಂಡರು. ವಿಂಗ್ ಕಮಾಂಡರ್ ಅಮರ್ ಸಿಂಗ್ ಮತ್ತು ಶ್ರೀಕುಮಾರ್  ನೇತೃತ್ವದಲ್ಲಿ ಯೋಧರು ಅದ್ಭುತ ಪ್ರದರ್ಶನ ನೀಡಿದರು.

ಯುದ್ಧ ಹೆಲಿಕಾಪ್ಟರ್ ಮೂಲಕ ಪುಷ್ಪಾ ಚೆಲ್ಲುವ ಮೂಲಕ ಮೇಲಿನಿಂದ ಹಗ್ಗ ಹಿಡಿದು ಯೋಧರು ಕೆಳಗೆ ಇಳಿದರು.  ಎಂಟು ಸಾವಿರ ಅಡಿಗಳ ಎತ್ತರದಿಂದ ಆಕಾಶ ಗಂಗೆಯಿಂದ ಭೂಮಿಗಿಳಿದ ಮಿಲಿಟರಿ ಪಡೆಯ ಅವಿನಾಶ್ ಸಾಹಸ ಎಲ್ಲರನ್ನು ಹಬ್ಬೇರಿಸುವಂತೆ ಮಾಡಿತು. ಆಗಸದಲ್ಲಿ ಸೇನಾ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ರೀತಿಯ ಸಾಹಸ ಪ್ರದರ್ಶನ ನಡೆಯಿತು.

ಆಗಸದಿಂದ ಮೂಡಿ ಬಂದ ಭಾರತದ ತ್ರಿವರ್ಣ ಧ್ವಜ, ನೋಡುಗರ ಮೈನವಿರೇಳಿಸಿತು. ಬಾನೆತ್ತರದ ಸ್ಕೈಡೈವಿಂಗ್, ಸೇರಿದಂತೆ ವಿವಿಧ ರೀತಿಯ ಸಾಹಸ ಪ್ರದರ್ಶನ ಏರ್ ಫೋರ್ಸ್ ಯೋಧರಿಂದ ಮೂಡಿಬಂತು. ಇನ್ನು ಬಿಸಿಲನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯ ಜನಸ್ತೋಮ ನೆರದು ಬಂತು.

ನಂತರ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ ಏರ್ ಶೋ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. 25 ಸಾವಿರ ಮಂದಿ ಕುಳಿತು ವೀಕ್ಷನೆ ಮಾಡಿರುವುದು ತುಂಬಾ ಖುಷಿತಂದಿದೆ. ಯೋಧರ ಸಾಹಸಮಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು. ಇದೇ ವೇಳೆ ಸಾಹಸ ಮೆರೆದ ಎಲ್ಲಾ ಯೋಧರನ್ನು ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾಯಿಸಲಾಯಿತು.

ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಅಧ್ಯಕ್ಷೆ ನಯೀಮ ಸುಲ್ತಾನ್, ಜಿ.ಪಂ.ಸಿಇಓ ಕೆ.ಜ್ಯೋತಿ, ಮಾಜಿ ಜಿ.ಪಂ. ಉಪಾಧ್ಯಕ್ಷ ಡಾ.ಶಿವರಾಂ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣೇಶ್ವರ ರಾವ್, ಡಿಸಿಪಿ ವಿಷ್ಣುವರ್ಧನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News