ಉಪ ಚುನಾವಣೆಯಿಂದ ಜಿಲ್ಲೆಯ ಜನತೆ ಬೇಸತ್ತಿದ್ದಾರೆ: ಜಿಲ್ಲಾ ಕಾಂಗ್ರೆಸ್ ಮುಖಂಡ ಆಂಜನೇಯಲು

Update: 2018-10-14 17:43 GMT

ಬಳ್ಳಾರಿ, ಅ. 14: ಶ್ರೀರಾಮುಲು ಅಧಿಕಾರದ ಆಸೆಗಾಗಿ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಿಲ್ಲೆಯ ಜನತೆ ಉಪ ಚುನಾವಣೆಯಿಂದ ಬೇಸತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನರನ್ನು ದಡ್ಡರೆಂದು ಪರಿಗಣಿಸಿರುವ ಶ್ರೀರಾಮುಲು ಸಚಿವನಾಗುವ ಏಕೈಕ ಉದ್ದೇಶಕ್ಕಾಗಿ ರಾಜೀನಾಮೆ ರಾಜಕಾರಣದಿಂದ ಉಪ ಚುನಾವಣೆ ಎದುರಾಗಿದೆ ಎಂದು ವಾಗ್ದಾಳಿ ನಡೆಸಿದರು.

ಉಪಚುನಾವಣೆಯಲ್ಲಿ ಸಹೋದರಿ ಜೆ.ಶಾಂತಾಗೆ ಜಿಲ್ಲೆಯ ಜನತೆ ಅಶೀರ್ವಾದ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅದು ಅವರ ಭ್ರಮೆ. ಪ್ರತಿ ಬಾರಿಯೂ ಶ್ರೀರಾಮುಲು ಹೇಳಿದಂತೆ ಕುಣಿಯಲು ಜಿಲ್ಲೆಯ ಜನತೆ ಅವರ ಕೈಗೊಂಬೆಯಲ್ಲ ಎಂದು ಟೀಕಿಸಿದರು.

ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕುವ ತಾಕತ್ತು ನಿಮಗಿಲ್ಲ. ನಾಗೇಂದ್ರ ವಿರುದ್ಧ ಸೋಲಿನ ಭಯದಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ನೀವು ಫಲಾಯನ ಮಾಡಿದ್ದೀರಿ ಎಂದು ಅವರು, ಶ್ರೀರಾಮುಲು ವಿರುದ್ಧ ಲೇವಡಿ ಮಾಡಿದರು.

ರಾಜ್ಯ ನಾಯಕ ಎಂದು ಬಿಂಬಿಸಿಕೊಳ್ಳುವ ಶ್ರೀರಾಮುಲು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ತಮ್ಮ ಎದುರು ಸ್ಪರ್ಧಿಸಿ ಗೆದ್ದರೆ ಬಳ್ಳಾರಿ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದ ಆಂಜನೇಯಲು, ಬಾಯಿಗೆ ಬಂದಂತೆ ಮಾತಾಡುವುದು ಬಿಟ್ಟು ಧೈರ್ಯವಿದ್ದರೆ ಚುನಾವಣೆ ಎದುರಿಸಲಿ ಎಂದು ಪಂಥಾಹ್ವಾನ ನೀಡಿದರು.

ಶ್ರೀರಾಮುಲು ಗಾಜಿನ ಮನೆಯಲ್ಲಿದ್ದು ಬೇರೆಯವರಿಗೆ ಕಲ್ಲು ಬೀಸುವ ಮೊದಲು ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದು, ಅವರು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ ಎಂದು ಟೀಕಿಸಿದರು.

ರಾಜೀನಾಮೆ ಖಯಾಲಿ: ಜಿಲ್ಲೆಗೆ ಉಪಚುನಾವಣೆ ಅವಶ್ಯಕತೆ ಇರಲಿಲ್ಲ. ಒಮ್ಮೆ ಲೋಕಸಭೆ ಮತ್ತು ಎರಡು ಬಾರಿ ವಿಧಾನಸಭೆಗೆ ರಾಜಿನಾಮೆ ನೀಡಿರುವ ರಾಮುಲು ಅವರಿಗೆ ಅಧಿಕಾರಕ್ಕಾಗಿ ರಾಜೀನಾಮೆ ನೀಡುವ ಖಯಾಲಿ ಇದೆ ಎಂದು ಲೇವಡಿ ಮಾಡಿದರು.

ಶ್ರೀರಾಮುಲು ಜೈಲಿಗೆ: ಸುಳ್ಳು ದಾಖಲೆ ಸೃಷ್ಟಿಸಿ ಮಹಿಳೆಯೊಬ್ಬರ ಭೂಮಿ ಕಬಳಿಕೆ ಪ್ರಕರಣದಲ್ಲಿ ಶ್ರೀರಾಮುಲು ಜೈಲು ಸೇರುವುದು ನಿಶ್ಚಿತ ಎಂದು ಭವಿಷ್ಯ ನುಡಿದ ಆಂಜನೇಯಲು, ಈ ಸಂಬಂಧ ಲೋಕಾಯುಕ್ತ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದು, ಅದು ಅವರಿಗೆ ಮುಳುವಾಗಲಿದೆ ಎಂಬ ಎಚ್ಚರಿಕೆ ಇರಲಿ ಎಂದು ಸಲಹೆ ನೀಡಿದರು.

‘ಬಳ್ಳಾರಿ ಲೋಕಸಭೆ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಶೀಘ್ರವೇ ಆಗಲಿದ್ದು, ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಇದ್ದು, ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ. ಬಿಜೆಪಿ ಸೋಲಿನ ಭೀತಿಯಿಂದ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಅಪಪ್ರಚಾರ ಮಾಡುತಿದ್ದಾರೆ’
-ಆಂಜನೇಯಲು, ಜಿಲ್ಲಾ ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News