ಅ.16 ರಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ

Update: 2018-10-14 18:01 GMT

ಮಂಡ್ಯ, ಅ.14: ಶ್ರೀರಂಗಪಟ್ಟಣ ದಸರಾ ಮಹೋತ್ಸವನ್ನು ಅ.16 ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ರವಿವಾರ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಸಿದ್ದತಾ ವ್ಯವಸ್ಥೆ  ಪರಿಶೀಲಿಸಿದರು.

ನಂತರ ಸಭೆ ಹೊಟೇಲ್ ಮಯೂರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ಈಗಾಗಲೇ ರಚಿಸಿರುವ ಎಲ್ಲಾ ಉಪಸಮಿತಿಗಳು ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಅ.16 ರಂದು ಮಧ್ಯಾಹ್ನ 2 ಗಂಟೆಯಿಂದ 2:45 ಗಂಟೆವರೆಗೆ ಇರುವ ಶುಭಗಳಿಗೆಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ರ್ಪಾಚನೆ ಮಾಡಿದ ಬಳಿಕ, ಜಂಬೂ ಸವಾರಿ ಸೇರಿದಂತೆ ವಿವಿಧ ಕಲಾತಂಡಗಳ ಮೆರವಣಿಗೆ ಹೊರಡಲಿದೆ ಎಂದು ಅವರು ಹೇಳಿದರು.

ಮೆರವಣಿಗೆಯಲ್ಲಿ ಸಾಗಲು ಆಕರ್ಷಕ ಸ್ತಬ್ಧಚಿತ್ರಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸಿದ್ಧ ಪಡಿಸಿಕೊಳ್ಳಬೇಕು. ಇಲಾಖಾ ಮಾಹಿತಿಗಳ ಪ್ರದರ್ಶನ ಹಾಗೂ ಆಹಾರ ಮೇಳಕ್ಕೆ 40 ಮಳಿಗೆಗಳನ್ನು ಕಾಯ್ದಿರಿಸಲಾಗಿದ್ದು, ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಮೂರು ಆನೆಗಳು ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು, ಈ ಸಂಬಂಧ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜವಾಬ್ದಾರಿ ನಿರ್ವಹಿಸಬೇಕು.  ಪಟ್ಟಣದ ಮುಖ್ಯರಸ್ತೆ, ವೃತ್ತಗಳಿಗೆ ವಿದ್ಯುತ್ ದೀಪಲಂಕಾರ ಮಾಡಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕಲಾವಿದರ ಆತಿಥ್ಯದಲ್ಲಿ ಕೊರತೆಯಾಗಬಾರದು. ಗ್ರಾಮೀಣ ಹಾಗೂ ಕ್ರೀಡಾ ದಸರಾ, ಮಹಿಳಾ ದಸರಾ ಹಾಗೂ ರೈತ ದಸರಾ ಸೇರಿದಂದೆ ಇತರೆ ಕಾರ್ಯಕ್ರಮಗಳು ಗೊಂದಲವಿಲ್ಲದಂತೆ ನಡೆಯಬೇಕು ಎಂದು ಅವರು ತಾಕೀತು ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಹರ್ಷ, ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News