ಉಪಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ : ಮಜ್ದೂರ್ ಕಾಂಗ್ರೆಸ್ ಉಪಾಧ್ಯಕ್ಷ ಪುಟ್ಟಸ್ವಾಮಿ

Update: 2018-10-14 18:03 GMT

ಮಂಡ್ಯ, ಅ.14: ಲೋಕಸಭೆ ಉಪಚುನಾವಣೆಯಲ್ಲೂ ಮೈತ್ರಿ ಮುಂದುವರೆದಿದೆ. 5 ವರ್ಷಗಳ ಕಾಲ ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ. ಬಿಜೆಪಿಯವರ ಹೇಳಿಕೆಗೆ ಕಿವಿಗೊಡಬೇಡಿ ಎಂದು ಮಜ್ದೂರ್ ಕಾಂಗ್ರೆಸ್‍ನ ರಾಜ್ಯ ಉಪಾಧ್ಯಕ್ಷ ಪುಟ್ಟಸ್ವಾಮಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರವಿವಾರ ನಡೆದ ಜಿಲ್ಲಾ ಮಜ್ದೂರ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರದಾನಿ ನರೇಂದ್ರಮೋದಿ ವಿದೇಶ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ದೇಶದಲ್ಲಿ ಹಣದುಬ್ಬರ ಕುಸಿಯುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಮಜ್ದೂರ್ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಸರಕಾರದಿಂದ ಬಡವರಿಗೆ ದೊರಕುವ ಸೌಲಭ್ಯಗಳನ್ನು ದೊರಕಿಸಿಕೊಟ್ಟು, ಬಡವರ ಪರ ಕೆಲಸ ಮಾಡುತ್ತಿದೆ. ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ 6 ಸಾವಿರ ಕೋಟಿಗೂ ಅಧಿಕ ಹಣವಿದ್ದು, 38 ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಇಎಸ್‍ಐ, ಪಿಎಫ್, ವಾರದ ರಜೆ  ಕೊಡಿಸಲು ಐಎನ್‍ಟಿಯುಸಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ್ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ. ಚುನಾವಣೆಯಲ್ಲಿ ಮತ ಹಾಕುವವರು ಹೆಚ್ಚು ರೈತರು ಹಾಗೂ ಕಾರ್ಮಿಕರಾಗಿದ್ದು, ಅವರನ್ನು ಓಲೈಸುವ ನಿಟ್ಟಿನಲ್ಲಿ ಮಜ್ದೂರ್ ಕಾಂಗ್ರೆಸ್ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಸರಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಮಾನ್ಯ ಜನರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿತ್ತು. ಸಣ್ಣ ಕಾರಣಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿತು. ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಡಿ.ಸುದರ್ಶನ್, ಅಮರಾವತಿ ಚಂದ್ರಶೇಖರ್, ಸಿದ್ದರಾಮೇಗೌಡ, ಗಂಗಾಧರ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News