ಬೆಂಗಳೂರು ಕೊಡವ ಸಮಾಜದಲ್ಲಿ ಸಾಧಕರಿಗೆ ಸನ್ಮಾನ

Update: 2018-10-14 18:23 GMT

ಮಡಿಕೇರಿ,ಅ.14: ಬೆಂಗಳೂರು ಕೊಡವ ಸಮಾಜದಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅರ್ಥಪೂರ್ಣವಾಗಿ ಶನಿವಾರ ನಡೆಯಿತು.

ಕೊಡವ ಸಮಾಜದ ಬಳಿಯಿರುವ ಕಂಟೋನ್ಮೆಂಟ್ ವೃತ್ತದಲಿ ಬಿಬಿಎಂಪಿ ವತಿಯಿಂದ ಅನಾವರಣ ಮಾಡಲಾಗಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ವೃತ್ತಕ್ಕೆ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ ಸೇರಿದಂತೆ ಹಲವು ಗಣ್ಯರು ಮಾಲಾರ್ಪಣ ಮಾಡಿ ನಮನ ಸಲ್ಲಿಸಿದರು.

ಕಂಟೋನ್ಮೆಂಟ್ ವೃತ್ತದಲ್ಲಿರುವ ಫೀ.ಮಾ. ಕಾರ್ಯಪ್ಪ ಪ್ರತಿಮೆಯನ್ನು  ಬಿಬಿಎಂಪಿಯಿಂದ ಅನಾವರಣಗೊಳಿಸಲಾಗಿದೆ. ಇದಕ್ಕೆ ಕೊಡವ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ಕೊಡವ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಐತಿಚಂಡ ರಮೇಶ್ ಉತ್ತಪ್ಪ, ಕ್ರೀಡಾ ಕ್ಷೇತ್ರದಲ್ಲಿ ಮಚ್ಚಂಡ ರೋಹನ್ ಬೋಪಣ್ಣ, ಕೆಚ್ಚೆಟ್ಟಿರ ರೇಷ್ಮಾ ದೇವಯ್ಯ, ಕೊಲ್ಲಿರ ಸ್ಪೂರ್ತಿ. ಪಾಂಡಂಡ ದೇಚಮ್ಮ ಗಣಪತಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾನಿಧಿ ಚಿನ್ನದ ಪದಕವನ್ನು ಡಾ. ನುಚ್ಚಿಮಣಿಯಂಡ ಕಾರ್ತಿಕ್ ಅಯ್ಯಣ್ಣ,  ದೇವಣಿರ ಸಂತೋಷ್ ಅಪ್ಪಚ್ಚು, ಅಮ್ಮಣಿಚಂಡ ನೇಹಾ ವಿವೇಕ್, ಮದ್ರೀರ ದೇಚಮ್ಮ ಚಂಗಪ್ಪ ಅವರಿಗಳಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ಕೊಡವ ಸಮಾಜ ಜನಾಂಗದ ಸಾಧಕರಿಗೆ ಉತ್ತಮ ಪ್ರೋತ್ಸಾಹ, ನೆರವು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ. ಬಿಬಿಎಂಪಿ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಯನ್ನು ಅನಾವರಣ ಮಾಡಿರುವುದು ಹೆಮ್ಮೆ ಎನ್ನಿಸುತ್ತಿದೆ. ಈ ವೃತ್ತಕ್ಕೆ ಫೀಲ್ಡ್ ಮಾರ್ಷಲ್ ಅವರ ಹೆಸರಿಡಲು ಹಾಗೂ ಅದರ ನಿರ್ವಹಣೆಯನ್ನು ಕೊಡವ ಸಮಾಜಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು. 

ಮೇಯರ್ ಗಂಗಾಬಿಕೆ, ಹಾಗೂ ಮಾಜಿ ಮೇಯರ್ ಆರ್. ಸಂಪತ್ ರಾಜ್ ಅವರುಗಳಿಗೆ ಕೊಡವ ಸಮಾಜದಿಂದ ಸನ್ಮಾನ ಮಾಡಲಾಯಿತು. ಪ್ರತಿಮೆ ಅನಾವರಣಕ್ಕೆ ದುಡಿದ ಹಲವರಿಗೆ ಇದೇ ಸಂದರ್ಭ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಗೌರವ ಕಾರ್ಯದರ್ಶಿ ಚೆನ್ನಪಂಡ ಕೆ.ಸುಬ್ಬಯ್ಯ, ಸಹಕಾರ್ಯದರ್ಶಿ ಮಾಚೆಟ್ಟಿರ ಎಂ.ಡಾಲು, ಖಜಾಂಚಿ ಬೂವಡಿರ ಗಣಪತಿ, ಸಹ ಖಜಾಂಚಿ ಚೇರಂಡ ಎಂ.ಸುರೇಶ್, ಉಪಾಧ್ಯಕ್ಷಿಣಿ ಮಲ್ಲೇಂಗಡ ಮೀರಾ ಜಲಜಕುಮಾರ್, ಕೊಡವ ಸಮಾಜ ವಿದ್ಯಾನಿಧಿಯ ಅಧ್ಯಕ್ಷ ಚಂದೂರ ಪ್ರಿನ್ಸ್ ಕರುಂಬಯ್ಯ, ಸಂಚಾಲಕ ಬಾಳೆಕುಟ್ಟಿರ ನಂಜಪ್ಪ, ಖಜಾಂಚಿ ಚೊಟ್ಟೆಯಂಡಮಾಡ ಆರತಿ ಅಯ್ಯಮ್ಮ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಮಮೂರ್ತಿ ನಗರದ ನೆಲ್ಲಕ್ಕಿ ಕೊಡವ ಸಂಘ ಹಾಗೂ ಕೆ.ಆರ್.ಪುರ ಕಾವೇರಿ ಕೊಡವ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಲ್ಲೇಂಗಡ ಮುತ್ತಣ್ಣ ಹಾಗೂ ಪಳಂಗಂಡ ರೀಟಾ ನಾಚಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News