ಕಾಂಗ್ರೆಸ್, ಮತದಾರರಿಗೆ ದ್ರೋಹ ಮಾಡುವ ವ್ಯಕ್ತಿತ್ವ ನನ್ನದಲ್ಲ: ಶಾಸಕ ಟಿ.ಡಿ.ರಾಜೇಗೌಡ

Update: 2018-10-15 11:58 GMT

ಕೊಪ್ಪ, ಅ.15: ಹಿಂದಿನ ಶಾಸಕರು ಕಳೆದ 15 ವರ್ಷಗಳಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಗಮನ ನೀಡಿಲ್ಲ. ಪರಿಣಾಮ ಕ್ಷೇತ್ರದ ಶೇ.90ರಷ್ಟು ರಸ್ತೆಗಳು ಸಂಪೂರ್ಣ ಶಿಥಿಲಗೊಂಡಿದ್ದವು. ಈ ಬಾರಿಯ ಅತಿವೃಷ್ಟಿಗೆ ಈ ರಸ್ತೆಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗ್ರಾಮೀಣ ರಸ್ತೆ, ಸರಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಹಕ್ಕುಪತ್ರ ವಿತರಣೆಗೆ ಮೊದಲ ಅದ್ಯತೆ ನೀಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ತಾಲೂಕಿನ ಮರಿತೊಟ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂದಗಾರಿನಲ್ಲಿ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮರ್ಪಣೆ, ಅಹವಾಲು ಸ್ವೀಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಡೆದ ರಾಜಕೀಯ ಸ್ಥಿತ್ಯಂತರಗಳು ನಮಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಮಾಡಿತ್ತು. ಆ ಸಂದರ್ಭದ ಕೆಲವು ದಿನಗಳು ಜೈಲು ವಾಸಕ್ಕಿಂತಲೂ ಭೀಕರವಾಗಿತ್ತು. ರಾಜೇಗೌಡರು ಬಿಜೆಪಿಗೆ ಹೋಗಿಯೇ ಬಿಟ್ಟರು ಎಂದು ಬಿಂಬಿಸಲಾಯಿತು. ನಿಮ್ಮ ಬೆವರಿನ ಶ್ರಮದಿಂದ ಗೆದ್ದು ಬಂದವನು ನಾನು. ಕಾಂಗ್ರೆಸ್ ಪಕ್ಷ ಹಾಗೂ ಮತದಾರರಿಗೆ ದ್ರೋಹ ಮಾಡುವಂತಹ ವ್ಯಕ್ತಿತ್ವ ನನ್ನದಲ್ಲ ಎಂದರು. 

ಈ ವರ್ಷ ಕಳೆದ 34 ವರ್ಷಗಳಲ್ಲೇ ಅತೀಹೆಚ್ಚು ಮಳೆಯಾಗಿ ಮಲೆನಾಡಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಅವಧಿಯಲ್ಲಿ ಮೂರು ತಿಂಗಳುಗಳ ಕಾಲ ಅತೀವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೆಚ್ಚಿನ ಓಡಾಟ ಮಾಡಬೇಕಾಯಿತು. ಈ ಮಧ್ಯೆ ನನಗೆ ಮತನೀಡಿ ಗೆಲ್ಲಿಸಿದ ಕ್ಷೇತ್ರದ ಜನತೆಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ಈಗ ಕ್ಷೇತ್ರದ ಪ್ರತೀ ಪಂಚಾಯತ್‍ಗಳಿಗೆ ಹೋಗಿ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟಕ್ಕೆ ಹೋಗಿ ಜನರ ಸಮಸ್ಯೆ ಆಲಿಸುತ್ತೇನೆ. ಎಲ್ಲಾ ಸಮಸ್ಯೆಗಳಿಗೂ ಆದ್ಯತೆಯ ಮೇಲೆ ಪರಿಹಾರ ದೊರಕಿಸಿಕೊಡುವ ನಿಟ್ಟನಿಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಎಪಿಎಂಸಿ ಅಧ್ಯಕ್ಷ ಒ.ಡಿ. ರತ್ನಾಕರ್, ರಾಜೇಗೌಡರು ಶಾಸಕರಾದ ಮೇಲೆ ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಕ್ರಮಗಳಿಗೆ ಮರುಚಾಲನೆ ನೀಡಿದ್ದಾರೆ. ಫಾ.50 ಮತ್ತು ಫಾ.53ರ ಅಡಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಹಕ್ಕುಪತ್ರ ನೀಡುವುದು. 94ಸಿ ಮತ್ತು 94ಸಿಸಿ ಅಡಿ ಅರ್ಜಿ ಸಲ್ಲಿಸಿದ್ದ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ವರ್ಷ ಅತೀವೃಷ್ಟಿಯಿಂದ ಹಾನಿಗೊಳಗಾದ ಕುಟುಂಬಳಿಗೆ ಅತೀ ಹೆಚ್ಚು ಪರಿಹಾರ ಕೊಡಿಸುವಲ್ಲಿಯೂ ಶಾಸಕರ ಶ್ರಮ ಇದೆ. ಶಾಸಕರು ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿದ್ದು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. 

ಕಾರ್ಯಕ್ರಮದಲ್ಲಿ ಗ್ರಾಮಸ್ಥರ ವತಿಯಿಂದ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಅಹವಾಲು ಸಲ್ಲಿಸಿದರು. ಕಾಂಗ್ರೆಸ್ ಪಂಚಾಯತ್ ಸಮಿತಿ ಅಧ್ಯಕ್ಷ ಹುಲುಗಾರ್ ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಸುಧೀರ್ ಕುಮಾರ್ ಮುರೊಳ್ಳಿ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾರ್ವೆ ಸಾದಿಕ್, ಹೋಬಳಿ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಲತಾ, ಬೂತ್ ಸಮಿತಿ ಅಧ್ಯಕ್ಷರಾದ ಲೂಯಿಸ್, ಮಂಜುನಾಥ್, ಸುನಿಲ್ ಪಕ್ಷದ ಮುಖಂಡ ಶಶಿಕುಮಾರ್, ಮರಿತೊಟ್ಲು ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News