ಮಡಿಕೇರಿ: ಸರ್ಕಾರಿ ಪದವಿ ಪೂರ್ವ ಕಾಲೇಜ್ ಬಾಲಕಿಯರ ಹಾಕಿ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2018-10-15 12:46 GMT

ಮಡಿಕೇರಿ, ಅ.15: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಬಾಗಲಕೋಟೆ ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಯಾಗಿದೆ. 

ಬಾಗಲಕೋಟೆಯಲ್ಲಿ ಮುಕ್ತಾಯಗೊಂಡ ಪಿಯು ವಿಭಾಗದ ಬಾಲಕಿಯರ ಹಾಕಿ ಅಂತಿಮ ಪಂದ್ಯಾಟದಲ್ಲಿ ಮಡಿಕೇರಿ ಕಾಲೇಜು ತಂಡವು ಎದುರಾಳಿ ಮೈಸೂರು ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿದೆ. 

ಮಡಿಕೇರಿ ಕಾಲೇಜಿನ ತಂಡವು ಸೆಮಿಫೈನಲ್ ಟೂರ್ನಿಯಲ್ಲಿ ಚಿಕ್ಕೋಡಿ ಜಿಲ್ಲಾ ತಂಡವನ್ನು 10-0 ಗೋಲುಗಳಿಂದ ಪರಾಭವಗೊಳಿಸಿತ್ತು. ರಾಷ್ಟ್ರೀಯ ಹಾಕಿ ಟೂರ್ನಿ ನವೆಂಬರ್ ನಲ್ಲಿ ಪಂಜಾಬ್‍ನಲ್ಲಿ ನಡೆಯಲಿದೆ. ಕಾಲೇಜಿನ ಉಪನ್ಯಾಸಕಿ ಕೆ.ವೈ.ಸವಿತಾ ಅವರು ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಎನ್.ಎಸ್.ಚಿದಾನಂದ ಅವರು ಕ್ರೀಡಾಳುಗಳಿಗೆ ತರಬೇತಿ ನೀಡಿದ್ದರು ಎಂದು ಕಾಲೇಜು ಪ್ರಾಂಶುಪಾಲ ಪಿ.ಆರ್.ವಿಜಯ್  ತಿಳಿಸಿದ್ದಾರೆ. 

ರಾಜ್ಯ ಮಟ್ಟದ ಟೂರ್ನಿಯಲ್ಲಿ ತಂಡದ ನಾಯಕಿ ಆರ್.ಸುಸ್ಮಿತಾ ನೇತೃತ್ವದಲ್ಲಿ ಕ್ರೀಡಾಳುಗಳಾದ ಕೆ.ಎ.ವಿನ್ಯಾಶ್ರೀ, ಎಸ್.ಪಿ.ಲಿಖಿತಾ, ಪಿ.ಕೆ.ದೇಚಮ್ಮ, ಕೆ.ಎ.ದೀಪ್ತಿ, ಎನ್.ಪಿ.ದೇಚಮ್ಮ, ಶಯಾ ಕಾವೇರಮ್ಮ, ಎಸ್.ಯುಕ್ತಾ, ಪಿ.ಟಿ. ಶಿಲ್ಪಾ, ಕೆ.ಕೆ.ಗೌತಮಿ, ಪಿ.ಎನ್.ಅರ್ಪಿತಾ, ಬಿ.ಎಸ್.ಚಂದನ, ಲೀಲಾವತಿ,  ಎಚ್.ಜಿ.ಧನುಶ್ರೀ, ಪಿ.ಜೆ.ಕೃತಿ, ಬಿ.ಎ.ಚೈತ್ರಾ ಗೆಲುವಿಗೆ ಕಾರಣಕರ್ತರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News