ದಾವಣಗೆರೆ: ಸಿಡಿಲು ಬಡಿದು ತಾಯಿ ಮಗಳು ಸೇರಿ ನಾಲ್ವರು ಮೃತ್ಯು

Update: 2018-10-15 13:17 GMT

ದಾವಣಗೆರೆ,ಅ.15: ಜಿಲ್ಲೆಯಲ್ಲಿ ಸೋಮವಾರ ಬೀಸಿದ ಬಿರುಗಾಳಿ ಸಹಿತ ಮಳೆ, ಸಿಡಿಲಿಗೆ ತಾಯಿ ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಹರಪನಹಳ್ಳಿ ತಾಲೂಕಿನ ಚೆನ್ನಹಳ್ಳಿ ತಾಂಡದ ಲಲಿತಾಬಾಯಿ (28) ಶ್ವೇತ (11) ಹಾಗೂ ಜಗಳೂರು ತಾಲೂಕಿನ ಗೌಡಿಕಟ್ಟೆಯ ಶಾಂತಮ್ಮ (60), ಕಲ್ಲೇನಹಳ್ಳಿಯ ಅಜ್ಜಯ್ಯ (38) ಸಿಡಿಲಿಗೆ ಬಲಿಯಾದವರು.

ಘಟನೆ ವಿವರ: ಕೃಷಿ ಕೆಲಸದಲ್ಲಿ ನಿರತವಾಗಿದ್ದ ವೇಳೆ ಸಿಡಿಲು ಬಡಿದು ತಾಯಿ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹರಪನಹಳ್ಳಿ ತಾಲೂಕಿನ ಚೆನ್ನಹಳ್ಳಿ ತಾಂಡದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಲಲಿತಬಾಯಿ, ಶ್ವೇತ ಜಮೀನಿನಲ್ಲಿ ಸೌತೆಕಾಯಿ ಬಿಡಿಸಲು ಹೋದ ಸಂದರ್ಭ ದಿಢೀರ್ ಮಳೆ ಶುರುವಾಗಿದೆ. ಹೀಗಾಗಿ ತಾಯಿ ಮತ್ತು ಮಗಳು ಊಟಕ್ಕೆ ಕುಳಿತಿದ್ದು, ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಡಾ.ಮಧು ಹಾಗೂ ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ. 

ಜಗಳೂರು ತಾಲೂಕಿನ ಗೌಡಿಕಟ್ಟೆಯ ಶಾಂತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಡಿಲು ಬಡಿದು ರಸ್ತೆ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಅದೇ ರೀತಿ, ತಾಲೂಕಿನ ಕಲ್ಲೇನಹಳ್ಳಿಯ ಅಜ್ಜಯ್ಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಲು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News