‘ಉಪಚುನಾವಣೆ ಫಲಿತಾಂಶದ ಬಳಿಕ ನಾನು ಜೈಲಿಗೆ ಹೋಗುತ್ತೇನೋ ಇಲ್ಲವೋ ಗೊತ್ತಾಗಲಿದೆ’

Update: 2018-10-15 14:31 GMT

ಬೆಂಗಳೂರು, ಅ. 15: ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ನ.6ಕ್ಕೆ ನಾನು ಜೈಲಿಗೆ ಹೋಗುತ್ತೇನೋ ಇಲ್ಲವೋ ಗೊತ್ತಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಶ್ರೀರಾಮುಲುಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣ ಶ್ರೀರಾಮುಲು ಅವರು ನನ್ನನು ಅದೆಲ್ಲಿಗೋ ಕಳುಹಿಸುವುದಾಗಿ ಹೇಳಿದ್ದು, ಖಾಸಗಿ ವಾಹಿನಿಗಳಲ್ಲಿ ಅದೇ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಜನತೆ ಉತ್ತರ ನೀಡಲಿದ್ದಾರೆಂದು ತಿರುಗೇಟು ನೀಡಿದರು.

ನಾನು ಮತ್ತು ಶ್ರೀರಾಮುಲು ಇಬ್ಬರು ವೈಯಕ್ತಿಕವಾಗಿ ಸ್ನೇಹಿತರು. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ. ಹೀಗಾಗಿ ಅವರು ಏನೇನೋ ಹೇಳುತ್ತಿದ್ದಾರೆ. ಅವರು ಹೇಳುವ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ನ.6ರಂದು ಗೊತ್ತಾಗಲಿದೆ. ಸದ್ಯಕ್ಕೆ ನಮ್ಮಣ್ಣ ಶ್ರೀರಾಮುಲುಗೆ ನಾನು ಹೇಳಿದ ಮಾತನ್ನು ತಿಳಿಸಿ, ಅವರು ತುಂಬಾ ದೊಡ್ಡವರು ಎಂದು ಲೇವಡಿ ಮಾಡಿದರು.

ಒಮ್ಮತದ ಅಭ್ಯರ್ಥಿ: ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎಲ್ಲರ ಒಮ್ಮತದಿಂದ ಆಯ್ಕೆ ಮಾಡಿದ್ದು, ಯಾವುದೇ ಗೊಂದಲವಿಲ್ಲ. ಲೋಕಸಭೆ ಉಪ ಚುನಾವಣೆಯಾಗಿರುವುದರಿಂದ ಹೈಕಮಾಂಡ್‌ನ ಒಪ್ಪಿಗೆ ಪಡೆದು ಅಭ್ಯರ್ಥಿ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಎರಡು ಪಕ್ಷ ಒಂದೇ ದೃಷ್ಟಿ: ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷ, ಎರಡು ಕಣ್ಣುಗಳಾಗಿದ್ದರೂ, ನಮ್ಮಿಬ್ಬರ ದೃಷ್ಟಿ ಒಂದೇ. ಹೀಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್‌ನ ಮಧುಬಂಗಾರಪ್ಪರನ್ನು ಕಣಕ್ಕಿಳಿಸಿದ್ದೇವೆ. ರಾಜಕಾರಣದಲ್ಲಿ ಒಂದನ್ನು ಗೆಲ್ಲಬೇಕಾದರೆ ಮತ್ತೊಂದನ್ನು ಸೋಲಬೇಕು ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News