ಏಕತೆಯ ಪ್ರತಿಮೆಯ ಕೆಳಗೆ ಪಟೇಲ್ ಹೊರಡಿಸಿದ್ದ ಆರೆಸ್ಸೆಸ್ ನಿಷೇಧ ಆದೇಶದ ಪ್ರತಿ ಇಡಬೇಕು: ಕಾಂಗ್ರೆಸ್

Update: 2018-10-16 06:02 GMT

ಪುಣೆ, ಅ.16: ಶೀಘ್ರವೇ ಲೋಕಾರ್ಪಣೆಗೊಳ್ಳಲಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಪ್ರತಿಮೆ ಅಥವಾ ಏಕತೆಯ ಪ್ರತಿಮೆ ಕೆಳಗೆ 1948ರಲ್ಲಿ ಸಂಘಟನೆಯೊಂದರ ವಿರುದ್ಧ್ದ ಸರ್ದಾರ್ ಪಟೇಲ್ ಹೊರಡಿಸಿದ್ದ ನಿಷೇಧದ ಆದೇಶದ ಪ್ರತಿಯೊಂದನ್ನು ಇಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಥವಾ ಆರ್‌ಎಸ್‌ಎಸ್ ಹೆಸರು ಉಲ್ಲೇಖಿಸದೇ ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ.

ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದು ವ್ಯಾಖ್ಯಾನಿಸಲಾಗಿರುವ ಏಕತೆಯ ಪ್ರತಿಮೆ ಗುಜರಾತ್‌ನ ನರ್ಮದ ಜಿಲ್ಲೆಯಲ್ಲಿ ನಿರ್ಮಾಣಗೊಂಡಿದೆ.

‘‘ಈ ರೀತಿ ಮಾಡಿದರೆ, ದೇಶದ ಮೊದಲ ಗೃಹ ಸಚಿವರು ಆ ಸಂಘಟನೆ(ಆರ್‌ಎಸ್‌ಎಸ್)ಬಗ್ಗೆ ಎಂತಹ ಯೋಚನೆ ಹೊಂದಿದ್ದರು ಎಂದು ಜನರಿಗೆ ಗೊತ್ತಾಗುತ್ತದೆ. ಅವರಿಗೆ(ಆರ್‌ಎಸ್‌ಎಸ್-ಬಿಜೆಪಿ) ತನ್ನದೇ ಆದ ಹೀರೋಗಳಿಲ್ಲ...ಹಾಗಾಗಿ ಸರ್ದಾರ್ ಪಟೇಲ್‌ರ ಏಕತೆಯ ಪ್ರತಿಮೆ ನಿರ್ಮಿಸುತ್ತಿದ್ದಾರೆ. ಆ ಪ್ರತಿಮೆಯನ್ನು ಚೀನಾದಲ್ಲಿ ತಯಾರಿಸಲಾಗಿದೆ’’ ಎಂದು ಶರ್ಮಾ ವ್ಯಂಗ್ಯವಾಡಿದ್ದಾರೆ.

 ‘‘ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆಯಾದ ಬಳಿಕ 1948ರಲ್ಲಿ ಆಗಿನ ಗೃಹ ಸಚಿವ ಪಟೇಲ್ ಸಂಘಟನೆಯೊಂದರ ನಿಷೇಧಕ್ಕೆ ಆದೇಶಿಸಿ ಲಿಖಿತ ಪತ್ರ ಬರೆದಿದ್ದರು.... ಆ ಆದೇಶದ ಲಿಖಿತ ಪ್ರತಿಯನ್ನು ಪ್ರತಿಮೆಯ ಕಾಲ ಬುಡದಲ್ಲಿಡಬೇಕು. ಇದರಿಂದ ಆ ಸಂಘಟನೆಯ ಬಗ್ಗೆ ಪಟೇಲ್‌ರ ಯೋಚನೆ ಹೇಗಿತ್ತು ಎಂದು ದೇಶದ ಜನರಿಗೆ ಗೊತ್ತಾಗುತ್ತದೆ’’ ಎಂದು ಶರ್ಮಾ ಹೇಳಿದ್ದಾರೆ.

 ಕಾಂಗ್ರೆಸ್‌ನ ಹಿರಿಯ ನಾಯಕ ಶರ್ಮಾ ಆರ್‌ಎಸ್‌ಎಸ್ ಹೆಸರು ಹೇಳದೇ ಮಹಾತ್ಮಾ ಗಾಂಧಿ ಹತ್ಯೆಯ ಬಳಿಕ ಸಂಘಟನೆಯೊಂದರ ಮೇಲೆ ನಿಷೇಧ ಹೇರಲಾಗಿತ್ತು ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ವಿರುದ್ದ ಹೇರಲಾಗಿದ್ದ ನಿಷೇಧವನ್ನು ಆನಂತರ ಹಿಂಪಡೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News