ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ಪತ್ರಕರ್ತೆಯ ವಿರುದ್ಧ ಹೋರಾಟಕ್ಕೆ 97 ವಕೀಲರನ್ನು ನೇಮಿಸಿದ ಎಂ.ಜೆ.ಅಕ್ಬರ್ !

Update: 2018-10-16 08:56 GMT

ಹೊಸದಿಲ್ಲಿ, ಅ.16:ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ.ಅಕ್ಬರ್ ವಿರುದ್ಧ  ಸುಮಾರು 15 ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಹೊರಿಸಿದ ಹಿನ್ನೆಲೆಯಲ್ಲಿ ಅವರಲ್ಲೊಬ್ಬರಾದ ಪ್ರಿಯಾ ರಮಣಿ ವಿರುದ್ಧದ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ಸಚಿವರು ಬರೋಬ್ಬರಿ 97 ವಕೀಲರುಗಳ ತಂಡವನ್ನು ನೇಮಿಸಿದ್ದಾರೆ.

ಅಕ್ಬರ್ ಅವರಿಗಿರುವ ಪ್ರಭಾವದ ಮಟ್ಟವನ್ನು ಇದು ಸೂಚಿಸುತ್ತದೆಯಲ್ಲದೆ, ಅವರ ವಿರುದ್ಧ ಆರೋಪ ಹೊರಿಸಿರುವ ಹಲವರು ಪತ್ರಕರ್ತೆಯರ ದನಿಯನ್ನು ಕಾನೂನಿನ ಹೆಸರಿನಲ್ಲಿ ಅಮುಕುವ ಎಲ್ಲಾ ಪ್ರಯತ್ನಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ. ಇಲ್ಲಿ ಗಮನಿಸತಕ್ಕ ಅಂಶವೆಂದರೆ ಅಕ್ಬರ್ ವಿರುದ್ಧ ಆರೋಪ ಹೊರಿಸಿರುವ ಪತ್ರಕರ್ತೆಯರಲ್ಲಿ ಒಬ್ಬರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ.

ಸೋಮವಾರ ಅಕ್ಬರ್ ಅವರು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ತಮ್ಮ ವಕೀಲರಾದ ಕರಂಜವಾಲ ಆ್ಯಂಡ್ ಕೊ. ಮೂಲಕ ದಾಖಲಿಸಿದ್ದಾರೆ. 41 ಪುಟಗಳ ದೂರಿನಲ್ಲಿ ಅಕ್ಬರ್ ತನ್ನ ವಿರುದ್ಧ ರಮಣಿ ಪ್ರಕಟಿಸಿದ್ದ ಬರಹಗಳನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕಮೆಂಟ್ ಗಳನ್ನೂ ದೂರಿನೊಂದಿಗೆ ಲಗತ್ತಿಸಿದ್ದಾರೆ. ಐಪಿಸಿಯ ಸೆಕ್ಷನ್ 499 ಹಾಗೂ 500 ಅನ್ವಯ ಈ ಪ್ರಕರಣ ದಾಖಲಾಗಿದೆ.

ಪ್ರಿಯಾ ರಮಣಿ ಉದ್ದೇಶಪೂರ್ವಕವಾಗಿ ತನ್ನ ಮಾನಹಾನಿಗೈಯ್ಯಲು ಸುಳ್ಳು, ಅಸಮರ್ಥನೀಯ ಆರೋಪ ಹೊರಿಸಿವ್ಯಕ್ತಿತ್ವಕ್ಕೆ ಬಸಿ ಬಳಿಯಲು ಯತ್ನಿಸಿದ್ದಾರೆಂದು ಅಕ್ಬರ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಅಕ್ಬರ್ ದಾಖಲಿಸಿರುವ ಮಾನನಷ್ಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾ ರಮಣಿ, ಸತ್ಯ ಹಾಗೂ ಸಂಪೂರ್ಣ ಸತ್ಯವೊಂದೇ ತಮ್ಮ ರಕ್ಷಣೆಗಿದೆ ಎಂದಿದ್ದಾರೆ. ಸಚಿವರು ಬೆದರಿಕೆ ಹಾಗೂ ಕಿರುಕುಳ ಮೂಲಕ ತಮ್ಮ ವಿರುದ ಮಾತನಾಡಿರುವ ಮಹಿಳೆಯರ ದನಿ ಅಮುಕಲು ಹೊರಟಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News