ಬಳ್ಳಾರಿ ಲೋಕಸಭಾ ಚುನಾವಣೆ : ಬಿಜೆಪಿ ನಾಯಕರಿಗೆ ತಿರುಗೇಟು ನೀಡಿ ವಿ.ಎಸ್.ಉಗ್ರಪ್ಪ ಹೇಳಿದ್ದೇನು ?

Update: 2018-10-16 14:14 GMT

ಬಳ್ಳಾರಿ, ಅ.16: ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯು ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿಗೆ ಹೊರಗಿನವನು ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರು, ಬಳ್ಳಾರಿ ಬಿಟ್ಟು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು ಏಕೆ? ಅವರ ಕುಟುಂಬದ ಸದಸ್ಯರು ಇಲ್ಲಿಂದ ರಾಯಚೂರಿಗೆ ಹೋಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಏಕೆ? ಎಂದು ಪ್ರಶ್ನಿಸಿದರು.

ಮೊಳಕಾಲ್ಮೂರು, ಬದಾಮಿ ಹಾಗೂ ಶ್ರೀರಾಮುಲು ನಡುವಿನ ಸಂಬಂಧವೇನು? ಒಂದೇ ಭಾಗದಲ್ಲಿ ರಾಜಕಾರಣ ಮಾಡಬಾರದು. ನಾನು ಇಲ್ಲಿ ಚುನಾವಣೆಗಷ್ಟೇ ಸೀಮಿತವಾಗದೇ ಇಲ್ಲೆ ಮನೆ ಮಾಡಿ, ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಉಗ್ರಪ್ಪ ಹೇಳಿದರು.

ನನಗಿಂತ ಸಮರ್ಥವಾದ ಅಭ್ಯರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಆದರೂ, ಪಕ್ಷದ ನಿರ್ಧಾರದಂತೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆಯು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು, ಕಾಂಗ್ರೆಸ್ ಹಾಗೂ ಬಿಜೆಪಿ, ಪ್ರಧಾನಿ ನರೇಂದ್ರಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನಡುವಿನ ಹೋರಾಟವಾಗಿದೆ ಎಂದು ಅವರು ತಿಳಿಸಿದರು.

ನನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿದ್ದೇನೆ. ನಾನು ತಪ್ಪು ಮಾಡಿದ್ದರೆ ಜನರೇ ನನ್ನನ್ನು ಪ್ರಶ್ನಿಸುತ್ತಾರೆ. ಮೂರು ಬಾರಿ ಶಾಸಕನಾಗಿ, ವಿಧಾನಪರಿಷತ್ತಿನ ಸದಸ್ಯ, ವಿರೋಧ ಪಕ್ಷದ ನಾಯಕಗಾಗಿ ಕೆಲಸ ಮಾಡಿರುವ ಅನುಭವ ತನಗಿದೆ ಎಂದು ಉಗ್ರಪ್ಪ ಹೇಳಿದರು.
ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಮಾಡಿದ್ದೇನೆ. ಕಳೆದ ವರ್ಷ ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಹಾಗೂ ತಪೋವನ ಸ್ಥಾಪನೆಗೆ ಶ್ರಮಿಸಿದ್ದೇನೆ. ಅಲ್ಲದೆ, ಹಂಪಿ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಪ್ರಯತ್ನಿಸಿದ್ದೇನೆ ಎಂದು ಉಗ್ರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News