ರಾಜಕೀಯ ವಿಚಾರಗಳು ಬಂದಾಗ ನಾನು ಡಿ.ಕೆ.ಶಿವಕುಮಾರ್ ಜೊತೆ ನಿಲ್ಲುತ್ತೇನೆ : ಸಚಿವ ರಮೇಶ್ ಜಾರಕಿಹೊಳಿ

Update: 2018-10-16 14:35 GMT

ಬೆಂಗಳೂರು, ಅ.16: ನಾಯಕರಾದವರು ಕೇವಲ ತಮ್ಮ ಎದೆ ಉಬ್ಬಿಸಿಕೊಂಡು ಓಡಾಡುವುದಲ್ಲ. ಮಾಧ್ಯಮಗಳ ಎದುರು ಫೋಸ್ ಕೊಡುವುದಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತನೂ ಪ್ರಭಾವಿ ಮುಖಂಡನಾಗಿರುತ್ತಾನೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಶ್ರೀರಾಮುಲು ಆ ರೀತಿಯ ಹೇಳಿಕೆಯನ್ನು ನೀಡುವುದು ಸರಿಯಲ್ಲ. ಜೈಲಿಗೆ ಹೋಗುವುದು, ಬಿಡುವುದು ಅವರವರ ಹಣೆಬರಹದಲ್ಲಿರುತ್ತದೆ. ವೈಯಕ್ತಿಕವಾಗಿ ಅನೇಕ ವಿಚಾರಗಳಲ್ಲಿ ನನ್ನ ಹಾಗೂ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ರಾಜಕೀಯ ವಿಚಾರಗಳು ಬಂದಾಗ ನಾನು ಅವರ ಜೊತೆ ನಿಲ್ಲುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಉಸ್ತುವಾರಿ ನನ್ನ ಜವಾಬ್ದಾರಿ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಶಿವಕುಮಾರ್ ಅವರಿಗೆ ಸೇರಿದ್ದು. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ಬಳಿಕ ನಾನು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರವಾಗಿ ಪ್ರಚಾರ ನಡೆಸಲು ತೆರಳುತ್ತೇನೆ ಎಂದು ಅವರು ತಿಳಿಸಿದರು.
ನಾನು ಶಿವಕುಮಾರ್ ಜೊತೆ ಚುನಾವಣಾ ಪ್ರಚಾರ ಮಾಡುವುದಿಲ್ಲ. ಪಕ್ಷದ ಪರವಾಗಿ ಹಾಗೂ ಪಕ್ಷದ ಜೊತೆಯಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಶಾಸಕ ಬಿ.ನಾಗೇಂದ್ರ ಅವರ ಸಹೋದರನಿಗೆ ಟಿಕೆಟ್ ನೀಡುವಂತೆ ನಾವು ಮನವಿ ಮಾಡಿದ್ದೆವು. ಆದರೆ, ಹೈಕಮಾಂಡ್ ಉಗ್ರಪ್ಪರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಈ ಚುನಾವಣೆಯಲ್ಲಿ ಅವರು ಗೆಲ್ಲುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಈ ಉಪ ಚುನಾವಣೆಯಲ್ಲಿ ಆಪರೇಷನ್ ಕಮಲ ಎಲ್ಲ ನಡೆಯುವುದಿಲ್ಲ. ಹೊರಗಿನವರು, ಒಳಗಿನವರು ಎಂಬ ವಿಷಯ ಪ್ರಮುಖವಾಗುವುದಿಲ್ಲ. ಉಗ್ರಪ್ಪ ಗೆಲ್ಲಲೇಬೇಕು, ಗೆದ್ದೇ ಗೆಲ್ಲುತ್ತಾರೆ. ಚುನಾವಣಾ ಫಲಿತಾಂಶ ಏನೇ ಬರಲಿ ಮೈತ್ರಿ ಸರಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News