ಬಿಜೆಪಿಯವರು ಹಿಂದುತ್ವ ಪ್ರತಿಪಾದಿಸುವ ಮುನ್ನ ಸಂವಿಧಾನ ಓದಿಕೊಳ್ಳಲಿ : ಸಿಎಂ ಕುಮಾರಸ್ವಾಮಿ

Update: 2018-10-16 15:00 GMT
ಶಿವಮೊಗ್ಗ ನಗರದ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್ - ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯ ವೇಳೆ ಅಭ್ಯರ್ಥಿ ಮಧು ಬಂಗಾರಪ್ಪಗೆ ಹಸ್ತಲಾಘವ ನೀಡುತ್ತಿರುವ ಕಾಂಗ್ರೆಸ್ ನಾಯಕರು

ಶಿವಮೊಗ್ಗ, ಅ. 16: ಬಿಜೆಪಿಯವರು ಚುನಾವಣೆ ಬಂದಾಗಲೆಲ್ಲ ಹಿಂದುತ್ವ ಜಪಿಸಲಾರಂಭಿಸುತ್ತಾರೆ. ಈ ದೇಶದ ಸಂವಿಧಾನವೇ ಇವರಿಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದುತ್ವವನ್ನು ಇವರು ಗುತ್ತಿಗೆ ಪಡೆದುಕೊಂಡಿಲ್ಲ. ನಾವೆಲ್ಲರೂ ಹಿಂದೂಗಳೇ. ಪ್ರಸ್ತುತ ಬೇಕಾಗಿರುವುದು ಹಿಂದುತ್ವವಲ್ಲ. ಬಡವರ ಬದುಕು ಮುಖ್ಯವಾಗಿದೆ ಎಂದರು. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ತೈಲ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಮಾಡದ ಕೇಂದ್ರ ಬಿಜೆಪಿ ಸರ್ಕಾರ, ಹಿಂದುತ್ವದ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡು. ಬಿಜೆಪಿ ಇಂತಹ ಉದ್ದಟತನದಲ್ಲಿಯೇ ಕಾಲಹರಣ ಮಾಡುತ್ತಿದೆಯೇ ಹೊರತು ಬಡವರ ಪರವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಸಾಲಮನ್ನಾ: ನಾನು ಮುಖ್ಯಮಂತ್ರಿಯಾದ ನಂತರ ಕೇಂದ್ರದ ನೆರವು ಯಾಚಿಸದೆ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲ ಮನ್ನಾಗೆ ಇಲ್ಲಿಯವರೆಗೂ ಕ್ರಮಕೈಗೊಂಡಿಲ್ಲ. ಮೋದಿ ಅಲೆಯ ಬಗ್ಗೆ ಮಾತನಾಡುವ ಬಿಜೆಪಿಯವರು ರೈತರಿಗಾಗಿ ಮೋದಿ ಏನು ಮಾಡಿದ್ದಾರೆ ಎಂದು ಮೊದಲು ತಿಳಿದುಕೊಳ್ಳಲಿ ಎಂದು ಟೀಕಾಪ್ರಹಾರ ನಡೆಸಿದರು. 

ಕಸರತ್ತು ಬಿಡಿ: ಮೈತ್ರಿ ಸರ್ಕಾರಕ್ಕೆ ಪದೆ ಪದೇ ಡೆಡ್‍ಲೈನ್ ಹೇಳುವ ಹಪಾಪಹಿತನವನ್ನು ಬಿಜೆಪಿ ನಿಲ್ಲಿಸಬೇಕು. ನ. 10 ಕ್ಕೆ ಸರ್ಕಾರ ಬೀಳುತ್ತದೆ, ಇವತ್ತೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದೆಲ್ಲ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಮಾತನಾಡುತ್ತಲೇ ಬರುತ್ತಿದ್ದಾರೆ. ಬಿಜೆಪಿಯು ತನ್ನ ವ್ಯರ್ಥ ಕಸರತ್ತನ್ನು ಬಿಡಬೇಕು. ಬಿಜೆಪಿ ನಡೆಸುತ್ತಿರುವ ಈ ಕಸರತ್ತಿಗೆ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯ ಫಲಿತಾಂಶಗಳು ಉತ್ತರ ನೀಡುತ್ತವೆ ಎಂದರು. 

ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಯನ್ನು ನಾವೇ ಮಾಡಿದ್ದೆವೆ ಎಂದು ಬೀಗಿಕೊಳ್ಳುತ್ತಿರುವ ಬಿಜೆಪಿ ಹಿಂದಿನ ಇತಿಹಾಸಗಳನ್ನು ಗಮನಿಸಬೇಕು. ಬಂಗಾರಪ್ಪರ ಕಾಲದಲ್ಲಿ ಎಷ್ಟು ಅಭಿವೃದ್ದಿಯಾಗಿದೆ ಎಂಬುವುದು ಅವರಿಗೆ ಗೊತ್ತಾಗಬೇಕು. ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ತಾನೇ ಈ ಜಿಲ್ಲೆಗೆ ಖುದ್ದಾಗಿ ಅನುದಾನ ನೀಡಿದ್ದೇನೆ. ಅಭಿವೃದ್ದಿ ಎನ್ನುವುದು ಬಿಜೆಪಿಯ ಸ್ವತ್ತಲ್ಲ. ಅವರು ಸಣ್ಣತನದ ಮಾತನಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಯಲ್ಲಿ ಎಲ್ಲರ ಶ್ರಮವಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಮಧು ಬಂಗಾರಪ್ಪ, ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಸಚಿವೆ ಜಯಮಾಲ, ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕರಾದ ಅಪ್ಪಾಜಿಗೌಡ, ಶಾರದಾಪೂರ್ಯನಾಯ್ಕ್, ಜೆಡಿಎಸ್ ಮುಖಂಡರಾದ ಆರ್.ಎಂ.ಮಂಜುನಾಥಗೌಡ, ಎಂ.ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ತೀ.ನಾ.ಶ್ರೀನಿವಾಸ್, ಆರ್.ಪ್ರಸನ್ನಕುಮಾರ್ ಸೇರಿದಂತೆ ಮೊದಲಾದವರಿದ್ದರು. 

ಮೈತ್ರಿಕೂಟಕ್ಕೆ ಗೆಲುವು ಖಚಿತ
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೆಲವು ಕಡೆ ಕೊಂಚ ಗೊಂದಲವಿರುವುದು ನಿಜ. ಆದರೆ ಅದೆಲ್ಲವನ್ನು ಸರಿ ಮಾಡಿಕೊಳ್ಳುತ್ತೆವೆ. ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುತ್ತೆನೆ. ಮಧು ಬಂಗಾರಪ್ಪ ವಿಧಾನಸಭಾ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಈ ಸೋಲು ಲೋಕಸಭೆಗೆ ವಿಸ್ತಾರವಾಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಎಷ್ಟೋ ಚುನಾವಣೆಗಳಲ್ಲಿ ಇಲ್ಲಿ ಸೋತವರು ಅಲ್ಲಿ ಗೆದ್ದ ಊದಾಹರಣೆಯಿದೆ. ಶಾಸಕರ ಲೆಕ್ಕಾಚಾರದಲ್ಲಿ ಚುನಾವಣೆಯಿರುವುದಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಗೆಲುವು ಖಚಿತವಾಗಿದೆ' ಎಂದು ಹೆಚ್.ಡಿ.ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. 

'ಹರಕೆಯ ಕುರಿಯಲ್ಲ'
ಮಧು ಬಂಗಾರಪ್ಪ ಚುನಾವಣಾ ಅಖಾಡಕ್ಕಿಳಿದಿರುವುದು ಬಿಜೆಪಿಯವರನ್ನು ಭಯಭೀತರನ್ನಾಗಿಸಿದೆ. ಈ ಕಾರಣದಿಂದ ಬಿಜೆಪಿಯವರು ಏನೇನೋ ಹೇಳಲಾರಂಭಿಸಿದ್ದಾರೆ. ಮಧು ಹರಕೆಯ ಕುರಿಯಲ್ಲ. ಅವರು ಈ ನಾಡಿನ ಕಣ್ಮಣಿ, ಜಿಲ್ಲೆಯ ಅತ್ಯುತ್ತಮ ರಾಜಕಾರಣಿ ದಿವಂಗತ ಎಸ್. ಬಂಗಾರಪ್ಪರವರ ಮಗ. ನಮಗೆ ಮಧುವನ್ನು ಚುನಾವಣಾ ಕಣಕ್ಕಿಳಿಸಬೇಕೆಂಬ ಹಠವೇನೂ ಇರಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಒಟ್ಟಾಗುವಿಕೆ ಮತ್ತು ರಾಜ್ಯಕ್ಕೆ ಹೊಸ ಸಂದೇಶ ನೀಡುವ ಹಿನ್ನೆಲೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 

'ಹುಡುಗಾಟದ್ದಲ್ಲ, ದೇವರ ಆಟದ ಚುನಾವಣೆ'
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಬಿಜೆಪಿ ನಾಯಕರು ಹೇಳುತ್ತಿರುವಂತೆ ಹುಡುಗಾಟವಲ್ಲ. ದೇವರ ಆಟದ ಚುನಾವಣೆಯಾಗಿದೆ. ಈ ಆಟದಲ್ಲಿ ಬಿಜೆಪಿ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಕಾಗೋಡು ತಿಮ್ಮಪ್ಪರವರು ರಾಜ್ಯದ ಹಿರಿಯ, ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರ ಆಶೀರ್ವಾದ ನಮಗೆ ಸಿಕ್ಕಿರುವುದು ಪುಣ್ಯವಾಗಿದೆ. ಕಾಗೋಡು ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇದು ಕೇವಲ ವ್ಯಕ್ತಿಗತ ಚುನಾವಣೆಯಲ್ಲವಾಗಿದೆ. 2019 ರ ಲೋಕಸಭಾ ಚುನಾವಣೆಗೆ ಪರ್ಯಾಯ ಶಕ್ತಿ ಇಲ್ಲಿಂದಲೇ ಆರಂಭವಾಗಲಿದೆ ಎಂದು ಹೆಚ್.ಡಿ.ಕೆ. ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News