ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ

Update: 2018-10-16 15:05 GMT

ಶಿವಮೊಗ್ಗ, ಅ. 14: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ಎ. ದಯಾನಂದ್‍ರವರಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. 

ಈ ವೇಳೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್ವರ್ ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ರವೀಂದ್ರ ನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಧು ವಿಶೇಷ ಪೂಜೆ ನಡೆಸಿದರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು. 

ನಂತರ ಮೆರವಣಿಗೆಯಲ್ಲಿ ಎರಡು ಪಕ್ಷದ ನಾಯಕರು ನೆಹರೂ ಕ್ರೀಡಾಂಗಣದವರೆಗೆ ಆಗಮಿಸಿದರು. ಕ್ರೀಡಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸೇರಿದಂತೆ ಎರಡೂ ಪಕ್ಷದ ನಾಯಕರು ಮಾತನಾಡಿದರು. ತದನಂತರ ಮಧು ಬಂಗಾರಪ್ಪರವರು ಎರಡೂ ಪಕ್ಷಗಳ ನಾಯಕರ ಜೊತೆ ಡಿ.ಸಿ. ಕಚೇರಿಗೆ ಆಗಮಿಸಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. 

ಗೆಲ್ಲುವ ವಿಶ್ವಾಸ: ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಎದುರಾಳಿ ಯಾರೇ ಆಗಿರಲಿ. ತಮ್ಮ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ. ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ' ಎಂದರು. 

ಪಕ್ಷದ ನಾಯಕರ ಸೂಚನೆಯಂತೆ ಚುನಾವಣಾ ಕಣಕ್ಕಿಳಿದಿದ್ದೆನೆ. ನನ್ನ ವಿರುದ್ದ ಯಾರೂ ಏನೇ ಟೀಕೆ-ಟಿಪ್ಪಣಿ ಮಾಡಲಿ. ಆ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನವೆಂಬರ್ 6 ರಂದು ಹೊರಬೀಳಲಿರುವ ಫಲಿತಾಂಶ ಎಲ್ಲರಿಗೂ ಉತ್ತರ ನೀಡಲಿದೆ ಎಂದು ಹೇಳಿದರು. 

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, "ಮಧು ಬಂಗಾರಪ್ಪ ನನ್ನ ಪುತ್ರನ ಸಮಾನವಿದ್ದಂತೆ. ಮಧು ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ನಡೆಸಲಾಗುವುದು. ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ" ಎಂದರು. 

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರು ಮಾತನಾಡಿ, "ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಗೆಲುವು ನಿಶ್ಚಿತವಾಗಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂದ ಮತಕ್ಕಿಂತಲೂ ಹೆಚ್ಚು ಮತಗಳು ಮಧು ಬಂಗಾರಪ್ಪಗೆ ಬರಲಿದೆ" ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News