ದಸರಾ ರಜೆಗಳ ಪ್ರಯುಕ್ತ ಕೆಎಸ್ಸಾರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ

Update: 2018-10-16 15:20 GMT

ಬೆಂಗಳೂರು, ಅ.16: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್‌ಕ್ಲಾಸ್(ಮಲ್ಟಿ ಆಕ್ಸಲ್) ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ದಸರಾ ಹಬ್ಬದ ರಜೆಗಳ ಪ್ರಯುಕ್ತ ಕೆಎಸ್ಸಾರ್ಟಿಸಿ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ.17ರಿಂದ 22ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2500ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಈ ವಾಹನಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಆಚರಣೆ ಮಾಡಲಾಗುವುದು. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.20 ರಿಂದ 21ರವರೆಗೆ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.

ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 150 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 150 ವಾಹನಗಳು ಸೇರಿ ಒಟ್ಟಾರೆ 300 ದಸರಾ ವಿಶೇಷ ವಾಹನಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News