ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸಕ್ಕೆ ಚಾಲನೆ

Update: 2018-10-16 15:49 GMT

ಶ್ರೀರಂಗಪಟ್ಟಣ, ಅ.16: ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

ಮಧ್ಯಾಹ್ನ ಪಟ್ಟಣಕ್ಕೆ ಸಮೀಪದ ಕಿರಂಗೂರಿನ ಬನ್ನಿಮಂಟಪದ ಬಳಿ ಸಂಪ್ರದಾಯದಂತೆ ಭಾನುಪ್ರಕಾಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ನಂದಿಧ್ವಜಕ್ಕೆ ಪೂಜೆ  ಸಲ್ಲಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ದೊರೆಯಿತು.

ನಂತರ, ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಜಂಬೂಸವಾರಿಯ ಮೆರವಣಿಗೆ ಶ್ರೀರಂಗಪಟ್ಟಣದ ಕಡೆಗೆ ಸಾಗಿತು.

ಚಾಮುಂಡೇಶ್ವರಿ ವಿಗ್ರಹದ ಅಂಬಾರಿಯನ್ನು ಹೊತ್ತ ಅಭಿಮನ್ಯು(ಆನೆ ಹೆಸರು) ಗಂಭೀರ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿತು.

ಮೆರವಣಿಗೆಯಲ್ಲಿ ಜಾನಪದ ನೃತ್ಯ, ಗಾರುಡಿಗ ಗೊಂಬೆ, ಕಂಸಾಳೆ, ಹಿಮ್ಮೇಳ, ಇತರೆ  ಜಾನಪದ ಕಲಾ ಪ್ರಕಾರಗಳು ಗಮನ ಸೆಳೆದವು. ವಿವಿಧ ಇಲಾಖೆಗಳ ಸಾಧನೆ, ಮಾಹಿತಿ ಒಳಗೊಂಡ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿದ್ದವು.

ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಜಂಬೂಸವಾರಿ ಮೆರವಣಿಗೆ ಮೇಲೆ ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಹೂವು, ದವನ ಎರಚುತ್ತಾ ಭಕ್ತಭಾವ ಸಮರ್ಪಿಸಿದರು. ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಮೆರವಣಿಗೆ ಅಂತ್ಯಗೊಂಡಿತು.

ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೇಂಪುರ್, ವೆಂಕಟರಾವ್ ನಾಡಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ, ಇತರ ಗಣ್ಯರು ಹಾಗೂ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ:
ಜಂಬೂಸವಾರಿ ನಂತರ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಶ್ರೀರಂಗ ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ ಪ್ರೇಕ್ಷಕರನ್ನು ರಂಜಿಸಿತು. ಶಿಲ್ಪಿ ಚೌದರಿ ತಂಡದವರ ಮೈಸೂರು ಸಿಲ್ಕ್ ಹಾಗೂ ಕೊಡಿಯಾಲ ಸೀರೆಗಳ ಸೌಂದರ್ಯ ಪ್ರದರ್ಶನ ಗಮನ ಸೆಳೆಯಿತು. ಆಯಾನಾ ತಂಡದವರ ಸಮಕಾಲೀನ ನೃತ್ಯ ಪ್ರದರ್ಶನ ವಿಶೇಷವಾಗಿತ್ತು.
ಅ.17 ರಂದು ಸಂಜೆ 5 ಗಂಟೆಗೆ ಖ್ಯಾತ ಸಾಹಿತಿ ಪ್ರೊ.ಕೃಷ್ಣೇಗೌಡ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 5.30 ರಿಂದ ಸಂಗೀತ ನಿರ್ದೇಶಕ ಹಾಗೂ ಹಾಸ್ಯನಟ ಸಾಧು ಕೋಕಿಲ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ಗಾಯಕಿ ಅನುರಾಧಾ ಭಟ್ ಮತ್ತು ತಂಡದವರಿಂದ ಸಂಗೀತ ಸುಧೆ ಹಾಗೂ ಗೋಪಿಯವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ. 

ಸಂಜೆ 7ರಿಂದ ರಾಜೇಶ್ ಕೃಷ್ಣನ್, ಶಮಿತ ಮಲ್ನಾಡ್, ಸುಪ್ರಿಯಾ ಲೋಹಿತ್, ಪುರುಶೋತ್ತಮ ಹಾಗೂ ಸ ರಿ ಗ ಮ ಪ ಖ್ಯಾತ ತಾರೆಯರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಕಾಮಿಡಿ ಕಿಲಾಡಿಗಳು ವಿಜೇತ ಶಿವರಾಜ್ ಕೆ.ಆರ್.ಪೇಟೆಯವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮವಿದೆ.

ಅ.18 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಸಿದ್ದ ಸಾಹಿತಿ ಡಾ.ಲತಾರಾಜಶೇಖರ್ ಚಾಲನೆ ನೀಡುವರು. ಸಂಜೆ 6 ಗಂಟೆಗೆ ದಸರಾ ಸ್ಟಾರ್ಸ್ ನೈಟ್ ಏರ್ಪಡಿಸಿದ್ದು, ಖ್ಯಾತ ಚಲನಚಿತ್ರ ತಾರೆಯರಿಂದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News