ಶಿವಮೊಗ್ಗ ಬಳ್ಳಾರಿ ಗೆದ್ದಾಗಿದೆ ಮಂಡ್ಯವನ್ನೂ ಗೆಲ್ಲುತ್ತೇವೆ : ಯಡಿಯೂರಪ್ಪ

Update: 2018-10-16 15:55 GMT

ಮಂಡ್ಯ, ಅ.16: ನಾವು ಈಗಾಗಲೇ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರ ಗೆದ್ದಾಗಿದ್ದು,  ಮಂಡ್ಯವನ್ನೂ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಲೋಕಸಭಾ ಉಪಚುನಾವಣೆ ಸಂಬಂಧ ಮಂಗಳವಾರ ನಗರದಲ್ಲಿ ಬಿಜೆಪಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಉಪಚುನಾವಣೆಯ 5 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿದ್ದೇವೆ. ಮಂಡ್ಯದ ಈ ಉಪಚುನಾವಣೆಯನ್ನು ಪ್ರಧಾನಮಂತ್ರಿ ವಿಶೇಷವಾಗಿ ಗಮನಿಸುತ್ತಿದ್ದಾರೆ. ಎರಡು ದಿನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದರೂ ಶಿವಮೊಗ್ಗದಲ್ಲಿ ಅಭ್ಯರ್ಥಿ ಹಾಕಲು ಶಕ್ತವಾಗಿಲ್ಲ. ಜೆಡಿಎಸ್‍ನವರ ಕಾಲು ಹಿಡಿದು ಅವರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್‍ನವರು ಜೆಡಿಎಸ್‍ಗೆ ಅಧಿಕಾರವನ್ನು ಒತ್ತೆ ಇಟ್ಟಿದ್ದಾರೆ ಎಂದು ಅವರು ಟೀಕಿಸಿದರು.

ನನ್ನ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಕೋಟ್ಯಾಂತರ ರೂ. ಅನುದಾನ ನೀಡಿದ್ದೇನೆ. ಸರ್ವರಿಗೂ ಸಮಪಾಲು ನೀಡುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದೇನೆ. ಕುಮಾರಸ್ವಾಮಿ ಮಂಡ್ಯಕ್ಕೆ ಏನು ಮಾಡಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಮುಖ್ಯಮಂತ್ರಿ ಸೇರಿದಂತೆ ಸಚಿವರು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ. ಇಡೀ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ತಿಂಗಳಿಗೆ ಐದುಬಾರಿಯಾದರೂ ವಿಧಾನಸೌಧಕ್ಕೆ ಸಚಿವರು ಬರುವುದಿಲ್ಲ ಎಂದು ಅವರು ಆರೋಪಿಸಿದರು.

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಿದೆ. ಆದರೆ, ಮುಖ್ಯಮಂತ್ರಿ ಪ್ರಭಾವಿ ಗಣಿ ಮಾಲಕರ ರಕ್ಷಣೆಗೆ ನಿಂತಿದ್ದಾರೆ. ಕೆಆರ್‍ಎಸ್ ರಕ್ಷಣೆಗೆ ಬಿಜೆಪಿ ಹೋರಾಡಲಿದೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರ ಸರಕಾರದ ಬೊಕ್ಕಸದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಣಕಟ್ಟಿ ರೈತರ ಸಾಲಮನ್ನಾ ಮಾಡಿದರೆ ಪ್ರಧಾನಿ ಮೋದಿ ಬೇಡ ಎನ್ನುತ್ತಾರೆಯೇ? ಈ ವಿಚಾರದಲ್ಲಿ ಕುಮಾರಸ್ವಾಮಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಸಂಸದೆ ಶೋಭ ಕರಂದ್ಲಾಜೆ ಮಾತನಾಡಿ, ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಜೆಡಿಎಸ್ ಕಾಂಗ್ರೆಸ್ ಸರಕಾರ, ನಾಲ್ಕು ತಿಂಗಳಾದರೂ ಸಾಲಮನ್ನಾ ಮಾಡಿಲ್ಲವೆಂದು ಟೀಕಿಸಿದರು. 

ವಿಧಾನಸಭೆಯೊಳಗೆ ದೋಸ್ತಿ ಪಕ್ಷಗಳು ಅಧಿಕಾರ ನಡೆಸುತ್ತಿದ್ದರೆ, ಮಂಡ್ಯ, ರಾಮನಗರ, ಬಳ್ಳಾರಿ, ಶಿವಮೊಗ್ಗದಲ್ಲಿ ದೋಸ್ತಿಗಳ ಕುಸ್ತಿ ನಡೆಯುತ್ತಿದೆ. ಆ ಪಕ್ಷಗಳಲ್ಲೇ ಮೈತ್ರಿಗೆ ವಿರೋಧ ಇದೆ. ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಕಾರ್ಯಕರ್ತರು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಬಿ.ಮಂಜುನಾಥ್, ಎಂ.ಶಿವಣ್ಣ, ಶಾಸಕ ನಾಗೇಂದ್ರ, ಮಾಜಿ ಶಾಸಕ ಡಿ.ಎಸ್.ವೀರಯ್ಯ, ಜಿಪಂ ಸದಸ್ಯ ಎನ್.ಶಿವಣ್ಣ, ಅಭ್ಯರ್ಥಿ ಡಾ.ಸಿದ್ದರಾಮಯ್ಯ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News