ವ್ಯಾಪಂ ಆರೋಪಿಯೊಂದಿಗೆ ವೇದಿಕೆ ಹಂಚಿಕೊಂಡ ಶಿವರಾಜ್ ಸಿಂಗ್ ಚೌಹಾಣ್

Update: 2018-10-17 14:49 GMT

ಭೋಪಾಲ,ಅ.17: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ತನ್ನ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಸ್ವಕ್ಷೇತ್ರ ವಿದಿಶಾದಲ್ಲಿ ಆಯೋಜಿಲಾಗಿದ್ದ ರ್ಯಾಲಿಯಲ್ಲಿ ವ್ಯಾಪಂ ಆರೋಪಿ ಹಾಗು ಮಾಜಿ ಸಚಿವ ಲಕ್ಷ್ಮೀಕಾಂತ ಶರ್ಮಾ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದಲ್ಲದೆ,ಅವರನ್ನು ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡಿದ್ದು ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿದೆ.

ತನ್ನ ವಿರುದ್ಧ ದಾಖಲಾಗಿರುವ ವ್ಯಾಪಂ ಸಂಬಂಧಿತ ಪ್ರಕರಣಗಳಲ್ಲಿ ಒಂದೂವರೆ ವರ್ಷ ಜೈಲುಪಾಲಾಗಿ ಸದ್ಯ ಜಾಮೀನಿನಲ್ಲಿ ಹೊರಗಿರುವ ಶರ್ಮಾ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಮಧ್ಯಪ್ರದೇಶ ಬಿಜೆಪಿ ಘಟಕದಲ್ಲಿ ಪ್ರಮುಖ ನಾಯಕನಾಗಿದ್ದ ಅವರು 2014,ಜುಲೈನಲ್ಲಿ ತನ್ನ ಬಂಧನದ ಬೆನ್ನಲ್ಲೇ ಪಕ್ಷವನ್ನು ತೊರೆದಿದ್ದರು. ಚೌಹಾಣ್ ಶರ್ಮಾ ಜೊತೆ ವೇದಿಕೆ ಹಂಚಿಕೊಂಡ ಕುರಿತು ಆಡಳಿತಾರೂಢ ಬಿಜೆಪಿ ವಿರುದ್ಧ ಟ್ವಿಟರ್ ಬಾಣವನ್ನು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ವರಿಷ್ಠ ಕಮಲನಾಥ್ ಅವರು,ವ್ಯಾಪಂ ಹಗರಣದ ಹಲವಾರು ರಹಸ್ಯಗಳು ಶರ್ಮಾ ಬಳಿಯಲ್ಲಿವೆ ಎಂದು ಹೇಳಿದ್ದರೆ,ಕಾಂಗ್ರೆಸ್ ಪಕ್ಷದ ಹಲವಾರು ನಾಯಕರೂ ವ್ಯಾಪಂ ಹಗರಣದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ವಕ್ತಾರ ರಜನೀಶ್ ಅಗರವಾಲ್ ತಿರುಗೇಟು ನೀಡಿದ್ದಾರೆ.

 ಶರ್ಮಾ ಪ್ರದೇಶದ ಮಾಜಿ ಜನಪ್ರತಿನಿಧಿಯಾಗಿದ್ದರಿಂದ ಮುಖ್ಯಮಂತ್ರಿ ಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅಷ್ಟಕ್ಕೂ ಅವರ ವಿರುದ್ಧದ ಆರೋಪಗಳು ಇನ್ನಷ್ಟೇ ಸಾಬೀತಾಗಬೇಕಿವೆ. ಪಕ್ಷವು ಅವರಿಗೆ ಟಿಕೆಟ್ ನೀಡಿಲ್ಲ,ಅವರು ಪಕ್ಷದ ಸದಸ್ಯರೂ ಅಲ್ಲ ಎಂದಿದ್ದಾರೆ.

ವಿದಿಶಾ ರ್ಯಾಲಿಯು ಶರ್ಮಾ ಅವರು ಪಕ್ಷಕ್ಕೆ ಮರಳುವ ಸಂಭಾವ್ಯತೆಯ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸಿದೆ. ಶರ್ಮಾ 1993-2008ರ ಅವಧಿಯಲ್ಲಿ ತಾನು ಪ್ರತಿನಿಧಿಸಿದ್ದ ಸಿರೋಂಜ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕನಾಗಿದ್ದರೂ ವ್ಯಾಪಂ ಕಳಂಕದಿಂದಾಗಿ 2013ರ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದ ಶರ್ಮಾ ಕೇವಲ 1,500 ಮತಗಳ ಅಂತರದಿಂದ ಸ್ಥಾನವನ್ನು ಕಳೆದುಕೊಂಡಿದ್ದು, ಕ್ಷೇತ್ರದಲ್ಲಿ ಅವರ ಹಿಡಿತವನ್ನು ಸೂಚಿಸುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಶರ್ಮಾರನ್ನು ಕಣಕ್ಕಿಳಿಸುವುದು ಅಪಾಯಕಾರಿಯಾಗಬಹುದು ಎಂದು ಬಿಜೆಪಿಗೆ ಅನ್ನಿಸಿದರೆ ಅದು ಅವರ ಸೋದರ ಉಮಾಕಾಂತ ಶರ್ಮಾಗೆ ಟಿಕೆಟ್ ನೀಡಬಹುದು. ಇದೇ ವೇಳೆ ಶರ್ಮಾಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಅವರು ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ರಾಜಕೀಯ ಪಂಡಿತರು ನಿರೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News