ಮೈಸೂರು ರಾಜವಂಶಸ್ಥರಿಬ್ಬರ ಆರೋಗ್ಯ ಸ್ಥಿತಿ ಗಂಭೀರ: ಅರಮನೆಯಲ್ಲಿನ ನವರಾತ್ರಿ ಉತ್ಸವ ಸರಳ

Update: 2018-10-17 17:22 GMT

ಮೈಸೂರು,ಅ.17: ಮೈಸೂರು ರಾಜವಂಶಸ್ಥರ ಇಬ್ಬರು ಸದಸ್ಯರ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ನವರಾತ್ರಿ ಕಾರ್ಯಕ್ರಮಗಳು ಸರಳಗೊಂಡಿವೆ ಎಂದು ಹೇಳಲಾಗಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕೊನೆ ತಂಗಿ ವಿಶಾಲಾಕ್ಷಿ ಮತ್ತು ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟಚೆನ್ನಮ್ಮಣಿ(98) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಅರಮನೆಯಲ್ಲಿ ನಡೆಯಬೇಕಿದ್ದ ಆಯುಧಪೂಜಾ ಮತ್ತು ವಿಜಯದಶಮಿ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ.

ವಿಶಾಲಾಕ್ಷಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟಚೆನ್ನಮ್ಮಣಿ ಜೂ ಬಳಿಯ ಸಮ್ಮರ್ ಪ್ಯಾಲೇಸ್ ನಲ್ಲಿ ವಾಸವಾಗಿದ್ದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರಮನೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News