ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಕಣದಲ್ಲಿರುವ ಮೂವರೂ ಮಾಜಿ ಸಿಎಂಗಳ ಪುತ್ರರು ‘ಕೋಟ್ಯಧೀಶರು’!

Update: 2018-10-17 17:51 GMT

ಶಿವಮೊಗ್ಗ, ಅ. 17: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾಕಣ ದಿನ ಕಳೆದಂತೆ ರಂಗೇರಲಾರಂಭಿಸಿದ್ದು, ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಜೆಡಿಯುನಿಂದ ಉಮೇದುವಾರಿಕೆ ಅರ್ಜಿ ಸಲ್ಲಿಸಿರುವ ಮೂವರು ಅಭ್ಯರ್ಥಿಗಳು, ಮಾಜಿ ಮುಖ್ಯಮಂತ್ರಿಗಳ ಪುತ್ರರಾಗಿದ್ದು, ಎಲ್ಲರೂ ’ಕೋಟಿ ವೀರರೇ’ ಆಗಿರುವುದು ವಿಶೇಷವಾಗಿದೆ.

ನಾಮಪತ್ರದ ಜೊತೆ ಅಭ್ಯರ್ಥಿಗಳು ತಾವು ಹಾಗೂ ಕುಟುಂಬ ಸದಸ್ಯರು ಹೊಂದಿರುವ ಸ್ಥಿರ-ಚರಾಸ್ತಿ, ಕ್ರಿಮಿನಲ್ ಹಿನ್ನೆಲೆ ವಿವರ ಸಲ್ಲಿಸಿದ್ದು, ಅಭ್ಯರ್ಥಿಗಳ ಸಮಗ್ರ ವಿವರಗಳನ್ನು ಚುನಾವಣಾ ಆಯೋಗ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದೆ.

ಆಯೋಗದ ಮಾಹಿತಿಯಂತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಮಾಜಿ ಸಿಎಂ ದಿ.ಎಸ್.ಬಂಗಾರಪ್ಪಪುತ್ರ ಮಧು ಬಂಗಾರಪ್ಪ ಹಾಗೂ ಮಾಜಿ ಸಿಎಂ ದಿ. ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ತಮ್ಮ ಸ್ಥಿರ-ಚರ ಆಸ್ತಿಯ ವಿವರಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಮೂವರು ಮಾಜಿ ಸಿಎಂಗಳ ಪುತ್ರರಾಗಿದ್ದು, ಎಲ್ಲರೂ ಕೋಟ್ಯಧೀಶರೇ ಆಗಿದ್ದಾರೆ. ಅಲ್ಲದೆ, ಕೆಲವರು ಸಾಲಗಾರರೂ ಕೂಡ ಆಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ

ಬಿ.ವೈ.ರಾಘವೇಂದ್ರ ಸುಮಾರು 63 ಕೋಟಿ ರೂ. ಚರ-ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. 2017-18 ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾದ ಮಾಹಿತಿ ಅನ್ವಯ ಇವರು, 32.09 ಕೋಟಿ ರೂ. ಚರ ಹಾಗೂ 30.91 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಮಕ್ಕಳಾದ ಸುಭಾಷ್ ಹೆಸರಲ್ಲಿ 18.38 ಲಕ್ಷ ರೂ. ಹಾಗೂ ಭಗತ್ ಹೆಸರಲ್ಲಿ 10.08 ಲಕ್ಷ ರೂ. ಆಸ್ತಿಯಿದೆ. ವಿವಿಧ ನ್ಯಾಯಾಲಯಗಳಲ್ಲಿ ಇವರ ವಿರುದ್ಧ ನಾಲ್ಕು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ವಿವಿಧ ಕಂಪೆನಿಗಳಲ್ಲಿ ರಾಘವೇಂದ್ರ ದಂಪತಿ 10 ಕೋಟಿ ರೂ. ಬಂಡವಾಳ ತೊಡಗಿಸಿದ್ದಾರೆ. ಬಿ.ವೈ.ರಾಘವೇಂದ್ರ ಅವರು ಪತ್ನಿ ತೇಜಸ್ವಿನಿಗೆ 30 ಲಕ್ಷ ರೂ., ಕಿರಿಯ ಸಹೋದರ ಬಿ.ವೈ. ವಿಜಯೇಂದ್ರಗೆ 20 ಲಕ್ಷ ರೂ. ಸಾಲ ಕೊಟ್ಟಿದ್ದಾರೆ. ದಂಪತಿ ಬಳಿ 1.40 ಕೋಟಿ ರೂ. ಮೌಲ್ಯದ ಎರಡು ಕೆ.ಜಿ. ಚಿನ್ನ, 200 ಗ್ರಾಂ ವಜ್ರ, 13 ಕೆ.ಜಿ. ಬೆಳ್ಳಿಯಿದೆ.

ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ 11 ಎಕರೆ, ಬಂಡಿಬೈರನಹಳ್ಳಿಯಲ್ಲಿ 6 ಎಕರೆ, ಶಿವಮೊಗ್ಗ ನಗರ ಸಮೀಪದ ಪುರುದಾಳುವಿನಲ್ಲಿ 2 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಶಿವಮೊಗ್ಗ ತಾಲೂಕು ಮಾಚೇನಹಳ್ಳಿಯಲ್ಲಿ 4.23 ಎಕರೆ, ಅರಕೆರೆಯಲ್ಲಿ 1 ಲಕ್ಷ ಚದರ ಅಡಿ ಜಾಗ ಮತ್ತು ಇದೇ ಗ್ರಾಮದಲ್ಲಿ 8 ಎಕರೆ, ಗಾಡಿಕೊಪ್ಪದಲ್ಲಿ 11 ಸಾವಿರ ಚದರ ಅಡಿ ಜಾಗ, ಊರಗಡೂರು ಬಳಿ 63 ಸಾವಿರ ಚದರ ಅಡಿ, ಕಾಶೀಪುರ ಬಡಾವಣೆಯಲ್ಲಿ 31 ಸಾವಿರ ಚದರ ಅಡಿ, ಗೋಪಾಳದಲ್ಲಿ 3 ಎಕರೆ, ಶಿಕಾರಿಪುರ ತಾಲೂಕು ಚನ್ನಹಳ್ಳಿಯಲ್ಲಿ 2 ಎಕರೆ ನಂದಿಹಳ್ಳಿಯಲ್ಲಿ 13 ಎಕರೆ ಭೂಮಿಯಿದೆ. ಶಿಕಾರಿಪುರದ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಮಾಳೇರಕೇರಿಯಲ್ಲಿ 2,100 ಚದರಡಿ ಕೃಷಿಯೇತರ ಭೂಮಿಯಿದೆ. ಜೊತೆಗೆ ನಾಲ್ಕು ಟ್ರ್ಯಾಕ್ಟರ್, ಎರಡು ದ್ವಿಚಕ್ರ ವಾಹನ ಇದೆ. 

ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 

ಮಧು ಬಂಗಾರಪ್ಪಅವರ ಒಟ್ಟಾರೆ ಸ್ಥಿರ-ಚರಾಸ್ತಿ ಮೊತ್ತ 47.75 ಕೋಟಿ ರೂ. ಇದರಲ್ಲಿ 10.35 ಕೋಟಿ ರೂ. ಚರಾಸ್ತಿ ಹಾಗೂ 37.40 ಕೋಟಿ ರೂ. ಸ್ಥಿರಾಸ್ತಿದೆ. ಉಳಿದಂತೆ ಇವರ ಪತ್ನಿಯ ಬಳಿ 10.35 ಕೋಟಿ ರೂ. ಚರಾಸ್ತಿ, ಪುತ್ರ ಸೂರ್ಯ ಮಧು ಬಂಗಾರಪ್ಪಬಳಿ 49 ಸಾವಿರ ರೂ. ಚರಾಸ್ತಿ ಹಾಗೂ 4.30 ಕೋಟಿ ರೂ. ಮೊತ್ತದ ಸ್ಥಿರಾಸ್ತಿಯಿದೆ. ಮಧು ಬಳಿ 81 ಲಕ್ಷ ನಗದು, ಪತ್ನಿ ಅನಿತಾ ಅವರ ಬಳಿ 10 ಲಕ್ಷ ನಗದು ಇದೆ. ಮಧುಗೆ ವಿವಿಧೆಡೆಯಿಂದ 7.52 ಕೋಟಿ ರೂ. ಸಾಲ ಬರಬೇಕಾಗಿದೆ.

ಮತ್ತೊಂದೆಡೆ ಅವರ ಪತ್ನಿಗೆ ಇವರು 8.72 ಕೋಟಿ ರೂ. ಸಾಲ ನೀಡಬೇಕಾಗಿದೆ. ದಂಪತಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದು, ಮಧು 10.81 ಕೋಟಿ ರೂ. ಹಾಗೂ ಪತ್ನಿ 24.49 ಲಕ್ಷ ರೂ. ಸಾಲ ಪಾವತಿಸಬೇಕಾಗಿದೆ. ಮಧು ಅವರ ಬಳಿ ಇನ್ನೋವಾ, ಫಾರ್ಚುನರ್ ಕಾರುಗಳಿವೆ. ಹಾಗೆಯೇ 1.25 ಕೋಟಿ ರೂ. ಮೊತ್ತದ 227.50 ಗ್ರಾಂ ಬಂಗಾರವಿದೆ. ಪತ್ನಿ ಬಳಿ 1,000 ಗ್ರಾಂ ಬಂಗಾರ ಮತ್ತು ವಜ್ರ, 25 ಕೆಜಿ ಬೆಳ್ಳಿ ಆಭರಣಗಳಿವೆ. ಮಧು ಅವರ ಹೆಸರಲ್ಲಿ ಸೊರಬ ತಾಲೂಕಿನ ತಲಗಡ್ಡೆ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ 11 ಗುಂಟೆ, 17 ಗುಂಟೆ, 5.33 ಎಕರೆ, 1.18 ಎಕರೆ, 3.26 ಎಕರೆ, 10.28 ಎಕರೆ ಕೃಷಿ ಜಮೀನಿದೆ. ಅಲ್ಲದೆ, ಕುಬಟೂರಿನಲ್ಲಿ 34 ಗುಂಟೆ, ಲಕ್ಕವಳ್ಳಿಯಲ್ಲಿ 5.27 ಹಾಗೂ 10.30 ಎಕರೆ, ಕೋಡಿಕೊಪ್ಪದಲ್ಲಿ 1 ಹಾಗೂ 2.28 ಎಕರೆ ಸೇರಿದಂತೆ ಈ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿ ಕೃಷಿ ಜಮೀನು ಹೊಂದಿದ್ದಾರೆ. ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿ 6 ಕೋಟಿ ರೂ. ಮೌಲ್ಯದ ವಾಣಿಜ್ಯ ಹಾಗೂ ಆರ್.ಎಂ.ವಿ. ಬಡಾವಣೆಯಲ್ಲಿ 20 ಕೋಟಿ ರೂ. ಮೌಲ್ಯದ ವಸತಿ ಕಟ್ಟಡವಿದೆ. ಶಿವಮೊಗ್ಗದ ಚೆನ್ನಪ್ಪ ಲೇಔಟ್‌ನಲ್ಲಿ 2 ಕೋಟಿ ರೂ. ಮೌಲ್ಯ ಹಾಗೂ ಸೊರಬ ತಾಲೂಕಿನ ಕುಬಟೂರಿನಲ್ಲಿ 10 ಸಾವಿರ ಚದರ ಅಡಿಯ ಕಟ್ಟಡವಿದೆ.

ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್

ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಬಳಿ 1.19 ಕೋಟಿ ರೂ. ಹಾಗೂ ಪತ್ನಿ ಬಳಿ 87.78 ಲಕ್ಷ ರೂ. ಚರಾಸ್ತಿಯಿದೆ. ಉಳಿದಂತೆ ಕ್ರಮವಾಗಿ ಮಹಿಮಾ, ಅವರ ಪತ್ನಿ ಬಳಿ 5.77 ಕೋಟಿ ರೂ. ಹಾಗೂ 4.63 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಹಣಕಾಸು ಸಂಸ್ಥೆಗಳಲ್ಲಿ ದಂಪತಿ 1.21 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. 2018-19ನೇ ಸಾಲಿನ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಮಾಹಿತಿ ಅನುಸಾರ ಮಹಿಮಾ ಅವರು 14.16 ಲಕ್ಷ ರೂ., ಪತ್ನಿ 17.48 ಲಕ್ಷ ರೂ. ಹಾಗೂ ಪುತ್ರ 70 ಸಾವಿರ ರೂ. ಆದಾಯ ತೋರಿಸಿದ್ದಾರೆ. ಬೆಂಗಳೂರಿನ ಡಾಲರ್ಸ್‌ ಕಾಲನಿ ಹಾಗೂ ದಾವಣಗೆರೆಯ ವಿದ್ಯಾನಗರದಲ್ಲಿ ಬಹುಕೋಟಿ ರೂ. ಮೌಲ್ಯದ ಸ್ವಂತ ಮನೆಗಳಿವೆ. ಮಹಿಮಾ ಅವರ ಬಳಿ 49.41 ಲಕ್ಷ ರೂ. ಹಾಗೂ ಪತ್ನಿಯ ಬಳಿ 14.95 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ. ಫಾರ್ಚುನರ್, ವಿವಿ ಪೋಲೊ, ಮಾರುತಿ ಎಸ್ಟೀಮ್ ಕಾರುಗಳಿವೆ. ಷೇರು ಮತ್ತಿತರೆಡೆ ದಂಪತಿ ಹೂಡಿಕೆ ಮಾಡಿದ್ದಾರೆ. ಪೊಲೀಸ್ ಠಾಣೆ/ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ಮಹಿಮಾ ಉಮೇದುವಾರಿಕೆ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News