ದಾವಣಗೆರೆ: ಯುವತಿಯ ಅತ್ಯಾಚಾರ, ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2018-10-17 17:56 GMT

ದಾವಣಗೆರೆ,ಅ.17: ಕಕ್ಕರಗೊಳ್ಳ ಗ್ರಾಮದ ಯುವತಿ ರಂಜಿತಾ ಮೇಲಿನ ಅತ್ಯಾಚಾರ, ಹತ್ಯೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಕಾರ್ಯಕರ್ತರು, ಕಕ್ಕರಗೊಳ್ಳ ಗ್ರಾಮದ ಬಡ ಕುಟುಂಬ ರಂಜಿತಾ ಮೇಲಿನ ಅತ್ಯಾಚಾರ, ಹತ್ಯೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಘೋಷಣೆ ಕೂಗುತ್ತಾ ಎಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ಮುಖಂಡರಾದ ಸುವರ್ಣಮ್ಮ, ಕಕ್ಕರಗೊಳ್ಳದಿಂದ ದಾವಣಗೆರೆ ಬಟ್ಟೆ ಅಂಗಡಿಗೆ ಕೆಲಸಕ್ಕೆ ಬಂದು, ರಾತ್ರಿ ಊರಿಗೆ ವಾಪಾಸ್ಸಾಗುತ್ತಿದ್ದ ವೇಳೆ ಕಳೆದ ದಿ.9ರಂದು ರಾತ್ರಿ ಆವರಗೊಳ್ಳ ರಸ್ತೆಯ ಕೇಂದ್ರಿಯ ವಿದ್ಯಾಲಯ ಪಕ್ಕದ ಕರೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ರಂಜಿತಾ ಮೇಲೆ ಅತ್ಯಾಚಾರ ಎಸಗಿ, ಅಮಾನುಷವಾಗಿ ಹತ್ಯೆ ಮಾಡಿರುವುದು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದರು.

ರಂಜಿತಾ ಅತ್ಯಾಚಾರಕ್ಕೊಳಗಾಗಿ, ಹತ್ಯೆಯಾಗಿ 9 ದಿನಗಳೇ ಕಳೆದರೂ ಪೊಲೀಸ್ ಇಲಾಖೆ ಈವರೆಗೆ ಯಾರೊಬ್ಬರನ್ನೂ ಬಂಧಿಸದೇ ಇರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟರು ಉತ್ತರಿಸಲಿ ಎಂದ ಅವರು, ಬಡ ಕುಟುಂಬದ ರಂಜಿತಾ ನಿತ್ಯವೂ ಕಕ್ಕರಗೊಳ್ಳದಿಂದ ದಾವಣಗೆರೆ ಬಟ್ಟೆ ಅಂಗಡಿಗೆ ಬಂದು, ಕೆಲಸ ಮಾಡಿಕೊಂಡು ರಾತ್ರಿ 7.30ರ ವೇಳೆಗೆ ಊರಿಗೆ ವಾಪಾಸ್ಸಾಗುತ್ತಿದ್ದಳು. ಇಂತಹ ಯುವತಿಯನ್ನು ಕರೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ, ಹತ್ಯೆಗೈದ ಪ್ರಕರಣದಲ್ಲಿ ಇಬ್ಬರಿಗಿಂತಲೂ ಹೆಚ್ಚು ಜನರಿರುವ ಸಾಧ್ಯತೆ ಇದೆ. ಇದೊಂದು ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣವೆಂಬುದನ್ನರಿತು, ಆರೋಪಿಗಳ ಬಂಧನಕ್ಕೆ ಇಲಾಖೆ ತಕ್ಷಣ ಮುಂದಾಗಲಿ ಎಂದು ಅವರು ಒತ್ತಾಯಿಸಿದರು. 

ನಿತ್ಯವೂ ಗ್ರಾಮೀಣ ಭಾಗದಿಂದ ನಗರ, ಪಟ್ಟಣಕ್ಕೆ ದುಡಿಯಲು ಬರುವ ಸಾವಿರಾರು ಹೆಣ್ಣು ಮಕ್ಕಳಿದ್ದಾರೆ. ಇಂದು ರಂಜಿತಾ ಆಗಿದ್ದು, ನಾಳೆ ಮತ್ತೆ ಯಾವುದೇ ಹೆಣ್ಣು ಮಕ್ಕಳ ಮೇಲೂ ಆಗಬಾರದು. ದೆಹಲಿಯ ನಿರ್ಭಯಾ ರೇಪ್, ಹತ್ಯೆ ಪ್ರಕರಣದಂತೆಯೇ ಕಕ್ಕರಗೊಳ್ಳದ ರಂಜಿತಾಳ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದರೂ ಪೊಲೀಸ್ ಇಲಾಖೆ ಇಷ್ಟು ದಿನಗಳಾದರೂ ಆರೋಪಿಗಳನ್ನು ಬಂಧಿಸದೇ ಇರುವುದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ ಎಂದರು. 

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗೀತಾ, ಮಂಜುಳಾ, ಮಾಲಾ ನಾಗರಾಜ, ನೇತ್ರಮ್ಮ, ಶಿವಲೀಲಾ, ಮಂಜುಳಾ, ಸಂಗೀತಾ, ಸುಜತಾ, ಶೋಭಮ್ಮ, ವಸಂತಮ್ಮ, ಶಾಂತಮ್ಮ, ರಾಜೇಶ್ವರಿ, ಮಹಿಳಾ ಸೇವಾ ಸಮಾಜ ಆವರಣದ ಪದವಿ, ಪಿಯು ಕಾಲೇಜು ವಿದ್ಯಾರ್ಥಿನಿಯರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News