ಮಂಡ್ಯ: ಸಾಲಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ

Update: 2018-10-17 18:18 GMT

ಮಂಡ್ಯ, ಅ.17: ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದ್ದು, ಸಾಲಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀರಂಗಪಟ್ಟಪಟ್ಟಣ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮ ಹಾಗೂ ಮದ್ದೂರು ತಾಲೂಕಿನ ಗುಳೂರು ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಹೆಬ್ಬಾಡಿಹುಂಡಿಯ ಈಶ್ವರ್(45) ಹಾಗೂ ಮದ್ದೂರು ತಾಲೂಕು ಗುಳೂರು ಗ್ರಾಮದ ಶಿವಣ್ಣ(40) ಆತ್ಮಹತ್ಯೆಗೆ ಶರಣಾದ ರೈತರು.

5 ಎಕರೆ ಜಮೀನು ಹೊಂದಿದ್ದ ಈಶ್ವರ್, ಕಬ್ಬು, ಭತ್ತ ಬೆಳೆಯುತ್ತಿದ್ದರು. ವ್ಯವಸಾಯಕ್ಕಾಗಿ ಎಸ್‍ಬಿಐ ಬ್ಯಾಂಕಿನಲ್ಲಿ 4 ಲಕ್ಷ ರೂ., ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಕೃಷಿಯಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ತನ್ನ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥರಾಗಿದ್ದ ಈಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶ್ರೀರಂಗಪಟ್ಟಣ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗುಳೂರಿನ ಶಿವಣ್ಣ ರೇಷ್ಮೆ ಬೆಳೆ ಬೆಳೆಯುತ್ತಿದ್ದು, ಈಚೆಗೆ ದರ ಕುಸಿತದಿಂದ ನಷ್ಟ ಹೊಂದಿದ್ದರು. ಮಾಡಿದ್ದ 5 ಲಕ್ಷ ರೂ. ಸಾಲವನ್ನು ತೀರಿಸಲು ಆಗದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News