ನಮಗೂ ಮೊದಲೇ ಬಿಜೆಪಿ ಪತ್ರ ಬರೆದಿದ್ದರೆ ದಾಖಲೆ ತೋರಿಸಲಿ: ಶಾಸಕ ಶಿವಶಂಕರಪ್ಪ ಸವಾಲು

Update: 2018-10-19 18:16 GMT

ದಾವಣಗೆರೆ,ಅ.19: ಗಾಜಿನ ಮನೆ ನಿರ್ಮಾಣಕ್ಕೆ ನಮಗಿಂತಲೂ ಮೊದಲೇ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದಿದ್ದರೆ ದೇವಸ್ಥಾನದಲ್ಲಿ ಗಂಟೆ ಹೊಡೆಯಲಿ ಅಥವಾ ಬರೆದಿದ್ದ ಪತ್ರ ತೋರಿಸಿದರೆ ಆ ಕ್ಷಣದಿಂದಲೇ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ. ಇಲ್ಲದಿದ್ದರೆ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ರಾಜಕೀಯ ನಿವೃತ್ತಿ ಹೊಂದಲಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದುವಾಡ ಬಳಿ ಗಾಜಿನ ಮನೆ ನಿರ್ಮಾಣಕ್ಕೆ ಹಿಂದೆ ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ಪತ್ರ ಬರೆದು ಒತ್ತಾಯಿಸಿದ್ದರೆಂದು ಸಂಸದ ಸಿದ್ದೇಶ್ವರ ಹೇಳುತ್ತಾರೆ. ರವೀಂದ್ರನಾಥ ಸಹ ಗಾಜಿನ ಮನೆ ತಮ್ಮ ಕೊಡುಗೆಯೆನ್ನುತ್ತಾರೆ. ಈ ಇಬ್ಬರೂ ಹಿಂದೆಯೇ ಗಾಜಿನ ಮನೆ ನಿರ್ಮಾಣಕ್ಕೆ ಪತ್ರ ಬರೆದಿದ್ದರೆ ಅದನ್ನು ದಾಖಲೆ ಪ್ರಕಾರ ತೋರಿಸಿ ಅಥವಾ ದೇವಸ್ಥಾನದಲ್ಲಿ ಗಂಟೆ ಹೊಡೆದು ಹೇಳಲಿ ಎಂದು ಅವರು ನೇರ ಸವಾಲು ಹಾಕಿದರು.

ಬಿಜೆಪಿಯವರಿಗೆ, ರವೀಂದ್ರನಾಥ, ಸಿದ್ದೇಶ್‍ಗೆ ಗಾಜಿನ ಮನೆಯೆಂದರೇನೆಂಬುದೇ ಗೊತ್ತಿಲ್ಲ. ರಾಜ್ಯದಲ್ಲೇ ಎಲ್ಲೂ ಇಲ್ಲದಂತಹ ಗಾಜಿನ ಮನೆಯನ್ನು ನಮ್ಮ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ನಿರ್ಮಾಣ ಮಾಡಿದ ನಂತರ ಬಿಜೆಪಿಯವರು ಈಗ ಟೀಕೆ ಮಾಡಲು ಬರುತ್ತಾರೆ, ಕಳ್ಳರು. ಎಂದು ಹರಿಹಾಯ್ದ ಅವರು, ಸಂಸದ ಸಿದ್ದೇಶ್ವರ್ ಎಲ್ಲದಕ್ಕೂ ಪತ್ರ ಬರೆದಿದ್ದೇನೆ, ಟಪಾಲು ಬರೆದಿದ್ದೇನೆಂದು ಹೇಳುತ್ತಾರೆ. ಸಂಸದ ಸಿದ್ದೇಶ್ವರ ಪತ್ರಕ್ಕೆ ಎಲ್ಲಿಯೂ ಕಿಮ್ಮತ್ತಿಲ್ಲ. ಬರೀ ಸುಳ್ಳು ಹೇಳಿಕೊಳ್ಳುತ್ತಲೇ ಬಂದ ಬಿಜೆಪಿಯವರು ಈಗ ಗಾಜಿನ ಮನೆ ವಿಚಾರದಲ್ಲೇ ಅದನ್ನೇ ಮಾಡುತ್ತಿದ್ದಾರಷ್ಟೇ ಎಂದರು.

ಗಾಜಿನ ಮನೆಗೆ ಪಾಲಿಕೆಯವರು ಶಾಮನೂರು ಗಾಜಿನ ಮನೆ ಎಂಬುದಾಗಿ ನಾಮಕರಣ ಮಾಡಲು ಮುಂದಾದರೆ, ಜಿಪಂನವರು ಕುಂದುವಾಡ ಗಾಜಿನ ಮನೆ ಸೇರಿದಂತೆ ಬೇರೆ ಬೇರೆ ಹೆಸರು ಹೇಳುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದಾರೆ. ಜಾತಿ ಪ್ರೇಮದಿಂದ ಕೆಲವರು ಕೆಲ ಹೆಸರು ಹೇಳಿದರೆ, ಮತ್ತೆ ಕೆಲವರು ರಾಷ್ಟ್ರ, ರಾಜ್ಯ ನಾಯಕರ ಹೆಸರು ಹೇಳುತ್ತಿದ್ದಾರೆ ಎಂದರು. 

ಪದೇಪದೇ ಗಾಜಿನ ಮನೆಯ ಹೆಸರಿಡುವ ವಿಚಾರದಲ್ಲಿ ಬಿಜೆಪಿ ಇಲ್ಲಸಲ್ಲದ ಗೊಂದಲ ಮೂಡಿಸುತ್ತಿದೆ. ಇಂತಹವರ ಮಾತಿಗೆಲ್ಲಾ ಕಿವಿಗೊಡುತ್ತಾ ಹೋದರೆ ಈಗ ಹೇಳುತ್ತಿರುವ ಹೆಸರುಗಳನ್ನೆಲ್ಲಾ ಬಿಟ್ಟು, ಕೊನೆಗೊಂದು ದಿನ ಗಾಜಿನ ಮನೆಗೆ ನನ್ನ ಹೆಸರಿಡಿ ಅಂದರೂ ಅಚ್ಚರಿಪಡಬೇಕಿಲ್ಲ ಎಂದರು. 
ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಇತರರು ಇದ್ದರು.

ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧ. ನೋಡೋಣ ನೀವು ಮಾಧ್ಯಮದವರು ಹೇಳುವಂತೆ ಸಚಿವ ಸ್ಥಾನವನ್ನು ಪಕ್ಷ ನೀಡಿದರೆ ಅದನ್ನು ವಹಿಸಿಕೊಳ್ಳಲು ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ ನಾನು ಮತ್ತೆ ಸ್ಪರ್ಧಿಸುತ್ತೇನೆ. ನಾನಷ್ಟೇ ಯಾಕೆ? ಕಾಂಗ್ರೆಸ್ ಟಿಕೆಟ್ ಕೊಡುತ್ತದೆಂದರೆ ಸತ್ತಿರುವ ನಮ್ಮಪ್ಪನೂ ಬಂದು ಚುನಾವಣೆಗೆ ನಿಲ್ಲುತ್ತಾನೆ ಎಂದು ಅವರು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News