ಕಡೂರು: ಸ್ಮಶಾನ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಗ್ರಾಮಸ್ಥರು ತ್ರಿಶಂಕು ಸ್ಥಿತಿಯಲ್ಲಿ

Update: 2018-10-19 18:34 GMT

ಕಡೂರು, ಅ.19: ಕಳೆದ ಮೂರು ದಶಕಗಳಿಂದ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ತಾಲೂಕಿ ಹರಳಘಟ್ಟ ಗ್ರಾಮ ಸ್ಮಶಾನವೆಂದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರುವುದರಿಂದ ಇಲ್ಲಿನ ಗ್ರಾಮಸ್ಥರು ಮೂಲಸೌಕರ್ಯದಿಂದ ವಂಚಿತಗೊಂಡು ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಸೌಲಭ್ಯಗಳು ಮರೀಚಿಕೆಯಾಗಿ ಉಳಿದಿದೆ.

ತಾಲೂಕಿನ ಎಮ್ಮೆದೊಡ್ಡಿ ಭಾಗದ ಹರಳಘಟ್ಟ ಗ್ರಾಮದಲ್ಲಿ ಈ ಹಿಂದೆ 1984ರಲ್ಲಿ ಅಂದಾಜು 35 ಜನರಿಗೆ ನಿವೇಶನದ ಹಕ್ಕುಪತ್ರ ನೀಡಲಾಗಿದ್ದು, ಈ ನಿವೇಶನದಲ್ಲಿ ಜನತಾ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಬಹುತೇಕ ಅರೆ ಅಲೆಮಾರಿ (ಹೆಳವರ)ಜನಾಂಗದವರಿದ್ದು, ಹಲವರು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಕೂಲಿ ಕಾರ್ಯದಲ್ಲಿ ನಿರತರಾಗಿ ಜೀವನ ನಡೆಸುತ್ತಿದ್ದಾರೆ.

ಇಲ್ಲಿನ ಗ್ರಾಮ ವಿರುವ ಜಾಗದ ಸ.ನಂ.4ರಲ್ಲಿನ ಜಾಗವನ್ನು 1998-99ನೇ ಸಾಲಿನಲ್ಲಿ ಸ್ಮಶಾನಕ್ಕೆಂದು 6 ಎಕರೆ ಜಾಗವನ್ನು ತರೀಕೆರೆ ಉಪವಿಭಾಗಾಧಿಕಾರಿಗಳು ಗುರುತಿಸಿ ಆದೇಶಿಸಿರುದುರಿಂದ ಸದ್ಯ ಗ್ರಾಮಸ್ಥರು ಇಕ್ಕಟ್ಟಿಗೆ ಸಿಲುಕಿದ್ದು, ಮೂಲಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿದೆ. ಮೊದಲು ಚಿಕ್ಕಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದ ಹರಳಘಟ್ಟ ಗ್ರಾಮವನ್ನು ಕಳೆದ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಹೊಸ ಗ್ರಾಮ ಪಂಚಾಯತನ್ನಾಗಿ ಪರಿವರ್ತಿಸಲಾಯಿತು. ಆದರೆ ಪಂಚಾಯತ್ ಕಚೇರಿಗೆ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಎಚ್.ರಾಂಪುರ ಗ್ರಾಮದಲ್ಲಿ ಪಂಚಾಯತ್ ಕಚೇರಿ ಆರಂಭಿಸಲಾಗಿದೆ. 

ಈ ಆದೇಶದಿಂದ ಹರಳಘಟ್ಟ ಗ್ರಾಮದ ಅಭಿವೃದ್ಧಿಗೆ ತೊಡಕಾಗಿದ್ದು, ಗ್ರಾಮ ಪಂಚಾಯತ್‍ಗೆ ಬರುವ ಯಾವುದೇ ಅನುದಾನವನ್ನು ಈ ಗ್ರಾಮಕ್ಕೆ ಬಳಸಲು ಬರುವುದಿಲ್ಲ. ಕಾರಣ ಈ ಗ್ರಾಮದ ಇರುವ ಜಾಗವೇ ಸ್ಮಶಾನಕ್ಕಾಗಿ ಕಾಯ್ದಿರಿಸಿರುವ ಜಾಗವಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಸ್ಮಶಾನದ ಜಾಗವೆಂದು ಕಾಯ್ದಿರಿಸಲು ಆದೇಶ ಮಾಡುವುದಕ್ಕೂ 14 ವರ್ಷ ಮುಂಚೆ ಜನತಾ ಮನೆಗಳನ್ನು ಕಟ್ಟಿಕೊಳ್ಳಲು ಹಕ್ಕು ಪತ್ರ ನೀಡಿದ್ದರೂ ಅದೇ ಜಾಗವನ್ನು ಸ್ಮಶಾನಕ್ಕೆ ಎಂದು ಮೀಸಲಿರಿಸುವುದು ಪ್ರಸಕ್ತ ಗ್ರಾಮಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಕಾರಿಯಾಗದಿರುವುದು ದುರದೃಷ್ಟಕರ. ಸಂಬಂಧಿಸಿದ ಪಹಣಿಯಲ್ಲಿ ಸ್ಮಶಾನ ಎಂದು ನಮೂದಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸೌಲಭ್ಯಗಳು ಮರೀಚಿಕೆಯಾಗಿದೆ. ಕನಿಷ್ಠ ಶೌಚಾಲಯ ನಿರ್ಮಾಣಕ್ಕೆ ಸಿಗುವ ಅನುದಾನ ಪಡೆಯಲು ಜಾಗ ಸ್ಮಶಾನ ಎಂದು ನಮೂದಾಗಿರುವುದರಿಂದ ಸಾಧ್ಯವಾಗುತ್ತಿಲ್ಲ. ಸ್ಮಶಾನಕ್ಕಾಗಿ ಬೇರೆ ಜಾಗವನ್ನು ಮೀಸಲಿಟ್ಟು, ಗ್ರಾಮಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಕಳೆದ 35 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗರ ಮನೆಗಳಿರುವ ಜಾಗವನ್ನು ಸ್ಮಶಾನಕ್ಕೆಂದು ಮೀಸಲಿರಿಸಲಾಗಿದೆ. ಈ ಸಂಬಂಧ ವಾಸ್ತಾವಂಶದ ವರದಿಯನ್ನು ತಹಶೀಲ್ದಾರ್ ಅವರಿಗೆ ನೀಡಲಾಗಿದೆ. ಅವರು ಈ ಸಂಬಂಧ ಅಗತ್ಯ ಕ್ರಮ ವಹಿಸಿ ಸ್ಮಶಾನಕ್ಕೆ ಬೇರೆ ಜಾಗ ನೀಡಿದಲ್ಲಿ ಪಂಚಾಯತ್‍ನ ಸೌ;ಭ್ಯಗಳನ್ನು ನೀಡಲು ಕ್ರಮವಹಿಸಲಾಗುವುದು.
- ರೆಹಮಾನ್, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಹರಳಘಟ್ಟ ಗ್ರಾ.ಪಂ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News