ಮಂಗಗಳ ಕಲ್ಲು ತೂರಾಟಕ್ಕೆ ವೃದ್ಧ ಬಲಿ!

Update: 2018-10-20 04:27 GMT

ಮೀರಠ್, ಅ.20: ಹವನಕ್ಕಾಗಿ ಒಣಮರ ತರಲು ಕಾಡಿಗೆ ಹೋಗಿದ್ದ 72ರ ವೃದ್ಧರೊಬ್ಬರನ್ನು ಮಂಗಗಳು ಕಲ್ಲೆಸೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬಾಗಪಥ ಗ್ರಾಮದಿಂದ ವರದಿಯಾಗಿದೆ.

ಒಣಮರದ ಕಟ್ಟಿಗೆಯನ್ನು ಸಂಗ್ರಹಿಸುತ್ತಿದ್ದ ಧರ್ಮಪಾಲ್ ಸಿಂಗ್ ಎಂಬಾತನ ಮೇಲೆ ಕೋತಿಗಳು ಇಟ್ಟಿಗೆ ಚೂರುಗಳನ್ನು ಎಸೆದು ಸಾಯಿಸಿವೆ. ಪಕ್ಕದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಿಂದ ಇಟ್ಟಿಗೆ ತುಂಡುಗಳನ್ನು ಸಂಗ್ರಹಿಸಿ ಈತನತ್ತ ಎಸೆದವು ಎಂದು ಪೊಲೀಸರು ಹೇಳಿದ್ದಾರೆ.

ಇಟ್ಟಿಗೆ ಚೂರುಗಳು ಸಿಂಗ್‌ನ ತಲೆ ಮತ್ತು ಎದೆಗೆ ಬಿದ್ದಿದ್ದು, ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಮೃತನ ಕುಟುಂಬದವರು ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಮಂಗಗಳನ್ನು ಆರೋಪಿಗಳನ್ನಾಗಿ ಹೆಸರಿಸಬೇಕು ಎಂದು ಆಗ್ರಹಿಸಿದೆ. ಆದರೆ ಈ ಬಗ್ಗೆ ಪೊಲೀಸರಲ್ಲಿ ಇನ್ನೂ ದ್ವಂದ್ವ ಇದೆ. ಕೇಸ್ ಡೈರಿಯಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿದೆ. ಇದರಿಂದ ಸಮಾಧಾನಗೊಳ್ಳದ ಕುಟುಂಬಸ್ಥರು ಮೇಲಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಮೃತ ವ್ಯಕ್ತಿಯ ಸಹೋದರ ಕೃಷ್ಣಪಾಲ್ ಸಿಂಗ್ ಹೇಳುವಂತೆ, "ಮಂಗಗಳು ಗುರುವಾರ ಧರ್ಮಪಾಲ್ ಸಿಂಗ್ ಮೇಲೆ 20ಕ್ಕೂ ಹೆಚ್ಚು ಇಟ್ಟಿಗೆಗಳನ್ನು ಎಸೆದಿವೆ. ಅವರ ತಲೆ, ಎದೆ ಮತ್ತು ಕಾಲುಗಳಿಗೆ ಇಟ್ಟಿಗೆಗಳು ಬಿದ್ದಿವೆ. ತೀರಾ ಎತ್ತರದಿಂದ ಇಟ್ಟಿಗೆ ಎಸೆದಿರುವುದರಿಂದ ಸಾವು ಸಂಭವಿಸಿದೆ. ಈ ಉದ್ರಿಕ್ತ ಮಂಗಗಳು ನಿಜವಾದ ಆರೋಪಿಗಳಾಗಿದ್ದು, ಅವುಗಳಿಗೆ ತಕ್ಕ ಶಾಸ್ತಿಯಾಗಬೇಕು. ನಾವು ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ" ಎಂದು ಅವರು ಹೇಳಿದ್ದಾರೆ. ಗ್ರಾಮದಲ್ಲಿ ಮಂಗಗಳ ಉಪಟಳ ವ್ಯಾಪಕವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News