ಸರಳ, ಸಾಂಸ್ಕೃತಿಕ ಮಡಿಕೇರಿ ದಸರಾ: ಒಗ್ಗಟ್ಟಿನಿಂದ ಮುನ್ನಡೆಯಲು ಜಿಲ್ಲಾಧಿಕಾರಿ ಶ್ರೀವಿದ್ಯಾ ಕರೆ

Update: 2018-10-20 11:50 GMT

ಮಡಿಕೇರಿ, ಅ.20: ಅತಿವೃಷ್ಟಿ ಹಾನಿ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಜರುಗಿದ ಮಡಿಕೇರಿ ದಸರಾದ ವಿಜಯ ದಶಮಿ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು.

ಗಾಂಧಿ ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ, ಮೈಸೂರು ದಸರಾ ಬಿಟ್ಟರೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಡಿಕೇರಿ ದಸರಾವನ್ನು ಪ್ರಥಮ ಬಾರಿಗೆ ಈ ಬಾರಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಆದರೂ ಜನತೆ ತಮ್ಮ ನೋವುಗಳನ್ನು ಮರೆತು ದಸರಾದ ಸಂಭ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಕೆಡುಕಿನ ವಿರುದ್ಧ ಒಳಿತಿನ ವಿಜಯವೇ ದಸರಾದ ಸಂದೇಶವಾಗಿದ್ದು, ಕೊಡಗಿನಲ್ಲೂ ಇದೀಗ ಎದುರಾಗಿರುವ ಕೆಡುಕು ಮಾಯವಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.
ಕೊಡಗಿನಲ್ಲಿ ಸಂಭವಿಸಿದ ದುರಂತವನ್ನು ನಾವೆಲ್ಲರೂ ಸಂಘಟಿತರಾಗಿ ಎದುರಿಸಿದ್ದೇವೆ. ಮುಂದೆಯೂ ನಾವೆಲ್ಲರೂ ಒಟ್ಟಾಗಿ ಮುಂದೆ ಸಾಗೋಣ ಎಂದು ಶ್ರೀವಿದ್ಯಾ ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಅಧೀಕ್ಷಕಿ ಸುಮನ್ ಪೆನ್ನೇಕರ್ ಅವರು, ಸಂಕಷ್ಟಗಳನ್ನು ಎದುರಿಸುವ ಶಕ್ತಿ ಕೊಡಗಿನ ಜನರ ರಕ್ತದಲ್ಲಿಯೇ ಬಂದಿದೆ. ಇದರಿಂದಾಗಿ ಪ್ರಾಕೃತಿಕ ವಿಕೋಪದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಮಾತನಾಡಿ, ನಮ್ಮೊಳಗಿರುವ ರಾವಣನನ್ನು ಸಂಹರಿಸುವ ಶಕ್ತಿಯನ್ನು ಆ ನವದುರ್ಗೆಯರು ನೀಡಲಿ ಎಂದು ಹಾರೈಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತಿತರರು ಮಾತನಾಡಿದರು.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಮಾದೇಟಿರ ಬೆಳ್ಯಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರೆ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ ಸ್ವಾಗತಿಸಿದರು. ಖಜಾಂಚಿ ಸಂಗೀತಾ ಪ್ರಸನ್ನ ವಂದಿಸಿದರು.

ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಸರಳವಾಗಿ ನಡೆದರೂ, ಕೆಲವು ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. ವಿಕ್ರಮ್ ಜಾದೂಗಾರ್ ಅವರಿಂದ ಮ್ಯಾಜಿಕ್ ಶೋ ಏರ್ಪಡಿಸಲಾಗಿತ್ತು. ಬೆಕ್ಕೆಸೊಡ್ಲೂರಿನ ಮಂದತವ್ವ ತಂಡದ ಕೊಡವ ಗೆಜ್ಜೆತಂಡದ ನೃತ್ಯ ನೆರೆದಿದ್ದವರ ಮನ ಸೆಳೆಯಿತು. ಇದೇ ತಂಡದ ಇನ್ನಿತರ ಕೊಡವ ನೃತ್ಯ, ಉಮ್ಮತ್ತಾಟ್, ಕೋಲಾಟ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಪ್ರೇಕ್ಷಕರ ಸಂಖ್ಯೆ ಮಾತ್ರ ವಿರಳವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News