ಕೊಡಗು ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಬೇಕು: ಸಿಎಂಗೆ ಶಾಸಕ ಅಪ್ಪಚ್ಚು ರಂಜನ್ ಮನವಿ

Update: 2018-10-20 12:00 GMT

ಮಡಿಕೇರಿ, ಅ.20: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬಹುತೇಕ ಸಂಪರ್ಕ ರಸ್ತೆಗಳು ಹಾನಿಗೊಳಗಾಗಿದ್ದು, ಸರಕಾರ ಕನಿಷ್ಠ ಒಂದು ಸಾವಿರ ಕೋಟಿ ರೂ.ಗಳನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಬಿಡುಗಡೆ ಮಾಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಕೊಡಗಿನ ಜನಪ್ರತಿನಿಧಿಗಳ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸುಮಾರು 13 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಶಾಸಕ ರಂಜನ್ ಸಲ್ಲಿಸಿದ್ದಾರೆ.

ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನ ಪುನರ್ ನಿರ್ಮಾಣಕ್ಕೆ ಪ್ರಾಧಿಕಾರ ರಚಿಸಬೇಕು. ಮನೆ ಕಳೆದುಕೊಂಡವರಿಗೆ ಕನಿಷ್ಟ 10 ಲಕ್ಷ ರೂ.ಗಳ ಮನೆ ನಿರ್ಮಿಸಿಕೊಡಬೇಕು. ಸಿ ಮತ್ತು ಡಿ ವರ್ಗದ ಜಮೀನನ್ನು ಸರಕಾರ ಈಗಾಗಲೇ ವಾಪಾಸ್ ಪಡೆದಿದ್ದು, ಅದರಲ್ಲಿ ಒಂದಷ್ಟು ಜಾಗವನ್ನು ಸಂತ್ರಸ್ತರಿಗೆ ಕೃಷಿ ಉದ್ದೇಶಕ್ಕಾಗಿ ವಿತರಿಸಬೇಕು. ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ರೈತರು, ಕಾಫಿ ಬೆಳೆಗಾರರು ತಮ್ಮ ಜಮೀನುಗಳ ದಾಖಲೆ ಪತ್ರಗಳ ಸಹಿತ ಎಲ್ಲಾ ರೀತಿಯ ದಾಖಲೆಗಳನ್ನು ಕಳೆದುಕೊಂಡಿದ್ದು, ಅವುಗಳನ್ನು ಮತ್ತೆ ಒದಗಿಸಿಕೊಡಲು ಪ್ರತ್ಯೇಕ ಅದಾಲತ್ ನಡೆಸಬೇಕು ಇಲ್ಲವೇ ಜಿಲ್ಲಾಡಳಿತ ಕೂಡಲೇ ದಾಖಲೆ ನೀಡಲು ಕ್ರಮಕೈಗೊಳ್ಳಬೇಕು. ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಅಪ್ಪಚ್ಚುರಂಜನ್ ಮನವಿ ಮಾಡಿದರು.

ಸಾಲ ಮನ್ನಾ ಮಾಡಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಮುಂದಿನ ಸಾಲಿನ ಫಸಲನ್ನು ಕಳೆದುಕೊಂಡು ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಾಲಗಳನ್ನು ಸರಕಾರ ಮನ್ನಾ ಮಾಡುವುದರೊಂದಿಗೆ ಕಾಫಿ ತೋಟಗಳನ್ನು ಪುನಶ್ಚೇತನಗೊಳಿಸುವುದಕ್ಕೆ ದೀರ್ಘಾವಧಿ ಮರು ಸಾಲವನ್ನು ನೀಡಬೇಕು. ಪ್ರಕೃತಿ ವಿಕೋಪದಿಂದ ಸಂತ್ರಸ್ತವಾಗಿರುವ ಎಲ್ಲಾ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು. ಈಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಕನಿಷ್ಟ 1000 ರೂ.ಗಳ ನೆರವನ್ನು ಸರಕಾರ ನೀಡಬೇಕು. ಪ್ರಕೃತಿ ವಿಕೋಪದ ಸಂದರ್ಭ ನೆಲಕ್ಕುರುಳಿರುವ ಮರಗಳನ್ನು ಸರಕಾರದ ಯಾವುದೇ ಶುಲ್ಕವಿಲ್ಲದೆ ಬಳಸಿಕೊಳ್ಳಲು ಅನುಮತಿ ನೀಡಬೇಕು. ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯವರು ಜಂಟಿಯಾಗಿ ಸಮೀಕ್ಷೆ ಮಾಡುವ ಮೂಲಕ  ಭೂಕುಸಿತಕ್ಕೊಳಗಾಗಿರುವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬಹುದೆನ್ನುವ ಬಗ್ಗೆ ಮಾಹಿತಿಯನ್ನು ನೀಡಬೇಕು. ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ, ಕೃಷಿ ಪರಿಕರ, ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಬ್ಸಿಡಿ ನೀಡಬೇಕು. ಸ್ವಂತವಾಗಿ ಮನೆ ಕಟ್ಟಿಕೊಳ್ಳಲು ಇಚ್ಛಿಸುವವರಿಗೆ ಸರಕಾರ ಅನುಮತಿ ನೀಡುವುದರೊಂದಿಗೆ ಅವರ ಪಾಲಿನ ಹಣವನ್ನು ಒದಗಿಸಿಕೊಡಬೇಕು. ಸಾಮಾಗ್ರಿಗಳ ಖರೀದಿಗೆ ನೀಡುವ 50 ಸಾವಿರ ರೂ.ಗಳ ನೆರವನ್ನು ಎಲ್ಲಾ ಸಂತ್ರಸ್ತ ಕುಟುಂಬಗಳಿಗೂ ಒದಗಿಸಬೇಕು ಎಂದು ಶಾಸಕ ಅಪ್ಪಚ್ಚುರಂಜನ್  ಮುಖ್ಯಮಂತ್ರಿಗಳ ಗಮನ ಸೆಳೆದರು.

ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಭೋಜೇಗೌಡ ಅವರುಗಳು ಮನವಿ ಪತ್ರಕ್ಕೆ ಸಹಿ ಮಾಡಿ ಇತ್ತೀಚೆಗೆ ಸಲ್ಲಿಸಿದ್ದು, ಜನಪ್ರತಿನಿಧಿಗಳ ಮನವಿಗೆ ಸಿಎಂ ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News