ಶಾಮನೂರು ಶಿವಶಂಕರಪ್ಪರ ದಬ್ಬಾಳಿಕೆಗೆ ಬಗ್ಗುವುದಿಲ್ಲ: ಎಂ.ಬಿ.ಪಾಟೀಲ್

Update: 2018-10-20 14:22 GMT

ವಿಜಯಪುರ, ಅ.20: ನಮ್ಮ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುವುದಾಗಿ ಹೇಳಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ದಬ್ಬಾಳಿಕೆಗೆ ನಾವು ಬಗ್ಗುವುದಿಲ್ಲ. ಅವರು ದೂರು ನೀಡಲಿ, ಮುಂದಿನ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ವಯಸ್ಸಿನಲ್ಲಿ ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ. ವಿನಯ್‌ ಕುಲಕರ್ಣಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ ಎಂದಿದ್ದಾರೆ. ಶಾಮನೂರು ಅವರ ಮಗ ಎಸ್.ಎಸ್.ಮಲ್ಲಿಕಾರ್ಜುನ್ ಏನು ಸೋತು ಬಣ್ಣವಾಗಿದ್ದಾರಾ? ಮೊದಲು ಅವರ ಮಗನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಉಪ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿರುವ ಪಂಚಪೀಠಾಧಿಪತಿಗಳ ಜೊತೆ ಶಾಮನೂರು ಕೈ ಜೋಡಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.

70 ಸಾವಿರ ಮುಸ್ಲಿಮ್ ಮತದಾರರಿರುವ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಆಯ್ಕೆಯಾಗಿದ್ದಾರೆ. ಅವರ ಮಗನ ಸೋಲಿಗೆ ಯಾರು ಕಾರಣ ಎಂಬುದನ್ನು ಆಲೋಚನೆ ಮಾಡಲಿ. ಆದರೆ, ನನ್ನ ಕ್ಷೇತ್ರದಲ್ಲಿ ಸ್ವತಃ ಪ್ರಧಾನಿ ನರೇಂದ್ರಮೋದಿ ಬಂದು ಪ್ರಚಾರ ಮಾಡಿ ಹೋಗಿದ್ದರೂ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಅವರು ಹೇಳಿದರು.

ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ, ಉಮೇಶ್ ಕತ್ತಿ, ಪಂಚ ಪೀಠಾಧೀಶರ ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದು ಬರೆಯಲಾಗಿದೆ. ರಾಜ್ಯದಲ್ಲಿ ಕೇವಲ 10 ಸಾವಿರ ಜನ ವೀರಶೈವ ಎಂದು ಬರೆದಿದ್ದಾರೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಎಂ.ಪಿ.ಪ್ರಕಾಶ್ ಸಾಫ್ಟ್‌ವೇರ್‌ನಲ್ಲಿ ‘ವೀರಶೈವ ಪದ’ ಸೇರಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ರಾಜ್ಯ ಸರಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಒಂದು ವೇಳೆ ತಿರಸ್ಕರಿಸಿದರೆ, ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ. ಶತ್ರುವಿನ ಶತ್ರು ಮಿತ್ರ ಎಂಬಂತೆ, ಶಾಮನೂರು ಶಿವಶಂಕರಪ್ಪ ರಂಭಾಪುರಿ ಶ್ರೀಗಳೊಂದಿಗೆ ಕೈ ಜೋಡಿಸಿದ್ದಾರೆ. ಈ ಎಲ್ಲ ವಿಚಾರಗಳ ಕುರಿತು ನವೆಂಬರ್ 3ರ ನಂತರ ಹೈಕಮಾಂಡ್ ಜೊತೆ ನಾವು ಚರ್ಚಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News